ಸಾಧನೆಗೆ ಬಡತನ ಅಡ್ಡಿ ಆಗಲಾರದೆಂಬುದನ್ನು ಸಾಕ್ಷೀಕರಿಸಿದ ಲಖನ

ರಾಯಬಾಗ 19: ಸಾಧನೆಗೆ ಬಡತನ ಅಡ್ಡಿ ಆಗಲಾರದು, ಕಠಿಣ ಪರಿಶ್ರಮ, ಸತತ ಪ್ರಯತ್ನ ಮಾಡಿದರೆ ಉನ್ನತ ಶ್ರೇಣಿಯಲ್ಲಿ ಪಾಸ್ ಆಗಲು ಸಾಧ್ಯವೆಂದು ತಾಲೂಕಿನ ಚಿಂಚಲಿ ಪಟ್ಟಣದ ಅಜೀತ ನಗರದ ವಿದ್ಯಾರ್ಥಿ ತೋರಿಸಿ ಕೊಟ್ಟಿದ್ದಾನೆ.  

ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ವಿದ್ಯಾರ್ಥಿ ಲಖನ ಶ್ರೀಮಂತ ಧರ್ಮಟ್ಟಿ ಇತನು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರತಿಶತ 92.5 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾನೆ. ಇತನು ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಬಿಸಿಎಮ್ ಹಾಸ್ಟೆಲ್ ದಲ್ಲಿ ಇದ್ದು, ಅಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದಾನೆ.  

ತಾಲೂಕಿನ ಚಿಂಚಲಿ ಪಟ್ಟಣದ ಅಜೀತ ನಗರದಲ್ಲಿ ಈ ವಿದ್ಯಾರ್ಥಿಯ ಕುಟುಂಬ ನೆಲೆಸಿದ್ದು, ಇತನ ತಂದೆ ಹಳ್ಳಿಗಳಲ್ಲಿ ಮನೆ ಮನೆ ತೆರಳಿ ಹಾಲು ಸಂಗ್ರಹಿಸಿ ಹಾಲಿನ ಡೇರೆಗೆ ಹಾಕುವ ಕೆಲಸ ಮಾಡುತ್ತಿದ್ದರೆ, ಇತನ ತಾಯಿ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಾರೆ. ಈ ವಿದ್ಯಾರ್ಥಿಯ ತಂದೆ-ತಾಯಿಗಳು ತಮ್ಮ ಮೂವರು ಮಕ್ಕಳಿಗೆ ತಮ್ಮ ದುಡಿಮೆಯಿಂದ ಬರುವ ಹಣದಲ್ಲಿ ಒಳ್ಳೆ ವಿದ್ಯಾಭ್ಯಾಸವನ್ನು ನೀಡುವುದರ ಜೊತೆಗೆ ತಮ್ಮ ಜೊತೆಯಿರುವ ತಂದೆ, ತಾಯಿ (ವಿದ್ಯಾರ್ಥಿ ಅಜ್ಜ-ಅಜ್ಜಿ) ಮತ್ತು ಮಂದ ಬುದ್ದಿಯ ಸಹೋದರನನ್ನು (ವಿದ್ಯಾರ್ಥಿ ದೊಡ್ಡಪ್ಪ) ನೋಡಿಕೊಳ್ಳುತ್ತಾ ಸಂಸಾರವನ್ನು ಸಾಗಿಸುತ್ತಿದ್ದಾರೆ.

ಇವರಿಗೆ ಸ್ವಂತ ಜಮೀನು ಕೂಡ ಇರುವುದಿಲ್ಲ. ಸರಕಾರದಿಂದ ದೊರೆತ ಜಾಗದಲ್ಲಿ ಬಹಳ ವರ್ಷಗಳ ಹಿಂದೆ ಕಟ್ಟಿಕೊಂಡಿರುವ ಸರಕಾರಿ ಮನೆಯಲ್ಲಿ ವಾಸವಿದ್ದು, ಅದು ಕೂಡ ಈಗ ಹಳೆದಾಗಿದ್ದು, ಬೀಳುವ ಹಂತದಲ್ಲಿದೆ. ತೀರ ಕಡು ಬಡತನದ ಕುಟುಂಬದಲ್ಲಿರುವ ಲಖನ ಇತನು ಮದಬಾವಿ ಮೂರಾರ್ಜಿ ವಸತಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೂಡ ಪ್ರತಿಶತ 98.4 ಅಂಕ ಪಡೆದು ಗ್ರಾಮೀಣ ಪ್ರತಿಭೆ ಎನ್ನುವ ಹೆಗ್ಗಳಿಕೆ ಪಡೆದಿದ್ದಾನೆ.  

ಸಿಇಟಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಂಡಿದ್ದು, ಅದರಲ್ಲಿ ಪಾಸ್ ಆಗಿ, ಹೆಚ್ಚಿನ ರ್ಯಾಂಕ್‌ನೊಂದಿಗೆ ಆಯ್ಕೆಯಾಗಿ ಇಂಜನಿಯರಿಂಗ್ ಅಧ್ಯಯನ ಮಾಡುವುದಾಗಿ ತನ್ನ ಮನದಾಳದ ಮಾತನ್ನು ಲಖನ ಬಿಚ್ಚಿಟಿದ್ದಾನೆ.   

ಬಡತನದಲ್ಲಿಯೇ ನನ್ನ ಮೂವರು ಮಕ್ಕಳಿಗೆ ಒಳ್ಳೆ ಶಿಕ್ಷಣ ಒದಗಿಸಲು ಪ್ರಯತ್ನಿಸಿದ್ದೇನೆ. ಹಿರಿಯ ಮಗನಾದ ಲಖನ ಇತನು ಮೊದಲಿನಿಂದಲೂ ಜಾಣನಾಗಿದ್ದು, ಆತನ ಕನಸು ನನಸು ಮಾಡಲು ಹಗಲಿರುಳು ಶ್ರಮಿಸುವುದಾಗಿ ತಂದೆ ಶ್ರೀಮಂತ ತಿಳಿಸಿದರು.