ಶನಿವಾರ ಗಂದಿಗವಾಡದಲ್ಲಿ ಖಾನಾಪುರ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

ಖಾನಾಪುರ 03: ತಾಲೂಕಿನ ಗಂದಿಗವಾಡ ಗ್ರಾಮದ ರಾಮಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಜ.6ರಂದು ಕನ್ನಡ ಸಾಹಿತ್ಯ ಪರಿಷತ್ತು ಖಾನಾಪುರ ತಾಲೂಕು ಘಟಕ, ಗಂದಿಗವಾಡಗ್ರಾಮ ಪಂಚಾಯ್ತಿ, ಗ್ರಾಮದ ವಿವಿಧ ಸಂಘಟನೆಗಳು, ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ತಾಲೂಕು ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಗಂದಿಗವಾಡ ಗ್ರಾಮ ಪಂಚಾಯ್ತಿ ಪಿಡಿಒ ಬಾಲರಾಜ್ ಭಜಂತ್ರಿ ಮತ್ತು ಅಧ್ಯಕ್ಷ ಅರ್ಜುನ ದೇಸಾಯಿ ಗಾಳಿ ತಿಳಿಸಿದ್ದಾರೆ.  

ಮಂಗಳವಾರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದ ಅವರು, ಶನಿವಾರ ಬೆಳಗ್ಗೆ 8ಕ್ಕೆ ನ್ಯಾಯವಾದಿ ದಯಾನಂದ ಹಿಟ್ಟಿನರಾಷ್ಟ್ರಧ್ವಜಾರೋಹಣ, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಪರಿಷತ್ತಿನ ಧ್ವಜಾರೋಹಣ ಮತ್ತು ಕಸಾಪ ತಾಲೂಕಾಧ್ಯಕ್ಷ ಬಸವಪ್ರಭು ಹಿರೇಮಠ ನಾಡಧ್ವಜಾರೋಹಣವನ್ನು ನೆರವೇರಿಸುವರು. 

ಅವರೊಳ್ಳಿಯ ಚನ್ನಬಸವ ದೇವರು ಸಮ್ಮೇಳನದ ಸಾನಿಧ್ಯ ವಹಿಸಲಿದ್ದಾರೆ.ಎಂ.ಕೆ ಹುಬ್ಬಳ್ಳಿ ರಾಣಿ ಶುಗರ್ಸ್‌ ಮಾಜಿಅಧ್ಯಕ್ಷ ನಾಸೀರ ಬಾಗವಾನ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮೃತ್ಯುಂಜಯ ಸ್ವಾಮಿ ಹಿರೇಮಠ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಕೆನರಾ ಸಂಸದ ಅನಂತಕುಮಾರ ಹೆಗಡೆ, ಶಾಸಕ ವಿಠ್ಠಲ ಹಲಗೇಕರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು, ಕನ್ನಡ ಪರಚಿಂತಕರು, ಕವಿಗಳು, ಲೇಖಕರು ಉಪಸ್ಥಿತರಿರಲಿದ್ದಾರೆ.  

ಮಧ್ಯಾಹ್ನ ವಿವಿಧ ಗೋಷ್ಠಿಗಳು ಮತ್ತು ಸಂಜೆ ಸಮಾರೋಪ ಸಮಾರಂಭ ಜರುಗಲಿದ್ದು, ಗ್ರಾಮದಲ್ಲಿ ಸಮ್ಮೇಳನದ ಸಿದ್ಧತೆಗಳು ನಡೆದಿವೆ, ಕ.ಸಾ.ಪ ಸದಸ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಈ ಕನ್ನಡದ ಕಾರ್ಯಕ್ರಮಕ್ಕೆ ಬಹುಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.