ಜೋಕುಮಾರ ಸ್ವಾಮಿ ಹೊತ್ತು ತಂದ ಮಹಿಳೆಯರು

ಲಕ್ಷ್ಮಣ ಎನ್‌. ಹಿರೇಕುರಬರ. 

ತಾಂಬಾ: ನಮ್ಮ ಹಳ್ಳಿಗರು ಮಾಡುವ ಮಣ್ಣಿನ ಪೂಜೆಗಳಲ್ಲಿ ಜೋಕುಮಾರ ಪೂಜೆ ಕೂಡ ಒಂದಾಗಿದೆ ಜೋಕುಮಾರ ಭಾದ್ರಪದ ಶುದ್ದ ಅಷ್ಟಮಿಯಂದು ಹುಟ್ಟಿ ಏಳು ದಿನ ಬದುಕಿರುತ್ತಾನೆ. ಅನಂತರ ಹುಣ್ಣಿಮೆ ದಿವಸ ಸಾಯುತ್ತಾನೆ ಈ ಹುಣ್ಣಿಮೆಗೆ 'ಜೋಕ್ಯಾನ ಹುಣ್ಣಿಮೆ' ಎಂತಲೂ ಕರೆಯುತ್ತಾರೆ. 

ಈ ಮೂರ್ತಿಯನ್ನು ಸಾಮಾನ್ಯವಾಗಿ ಪತ್ತಾರರು ತಯಾರಿಸುತ್ತಾರೆ. ಈ ಮೂರ್ತಿ 1 ರಿಂದ 2 ಅಡಿ ಎತ್ತರದ ಮಣ್ಣಿನ ಮುಖದ ಮುರ್ತಿಯನ್ನು ಮಾಡುತ್ತಾರೆ. ರೂಪದಲ್ಲಿ ಅರ್ಜುನನಂತೆ ಸುಂದರನು,ಹಳದಿ ವರ್ಣದವನು ಹಾಗೂ ಅಗಲವಾದ ಮುಖ, ಅದಕ್ಕೆ ತಕ್ಕಂತೆ ದೊಡ್ಡ ಕಣ್ಣುಗಳು,ದೊಡ್ಡ ಮೀಸೆ,ಹಣೆಯ ಮೇಲೆ ವಿಭೂತಿ,ಕುಂಕುಮ ದೊಡ್ಡ ಬಾಯಿ-ಬಾಯಿಗೆ ಬೆಣ್ಣೆ ಹಚ್ಚುತ್ತಾರೆ. ತಲೆಯ ಮೇಲೆ ರೂಮಾಲು ಸುತ್ತಿ ಒಂದು ಬುಟ್ಟಿಯಲ್ಲಿ ಬೇವಿನ ಸೊಪ್ಪನ್ನು ಹಾಕಿ ಮೂರ್ತಿಯನ್ನು ಇಟ್ಟು ಹೂ,ಪತ್ರಿ ಏರಿಸುತ್ತಾರೆ. ಈ ಬುಟ್ಟಿಗೆ ಅಲಕಂರಿಸಿ ಇದನ್ನು ತಳವಾರ (ಅಂಬಿಗರು) ಮಹಿಳೆಯರಾದ ಶಾಂತಾಬಾಯಿ ನಾಟಿಕಾರ, ಇಂದಿರಾಬಾಯಿ ಜಂಬಗಿ, ಬಸವ್ವ ತಳವಾರ, ರೇಣುಕಾ ತಳವಾರ, ಲಕ್ಕಮ್ಮ ತದ್ದೆವಾಡಿ ಅವರು ತಮ್ಮ ತಲೆ ಮೇಲೆ ಹೊತ್ತು ತರುತ್ತಾರೆ. ಮೊದಲಿಗೆ ಊರ ಗೌಡ ಪಾಟೀಲರ (ಹಾಲುಮತ ಸಮಾಜ) ಮನೆಗೆ ಹೋಗುತ್ತಾರೆ. ನಂತರ ಎಲ್ಲರ ಮನೆಗೆ ಹೋಗುತ್ತಾರೆ 

ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ ಗೂಡ್ಡಗಳಲ್ಲಿ ಹೈನಾಗೂ ಜೋಕುಮಾರ ಗೌಡರ ಸೆಡ್ಡಿಯ ಮ್ಯಾಲೆ ಸಿರಿ ಬಂದು ಜೋಕುಮಾರ ಹಾಸ್ಯಾಸಿ ಮಳೆ ಬಂದು ಬೀಸಿ-ಬಿಸಿ ಕೆರೆತುಂಬಿ ಬಾಸಿಂಗದಂಗ ತೆನೆಬಾಗಿ. 

ರಾಶಿಯ ಮ್ಯಾಲೆ ಬಂದು ಜೋಕುಮಾರ ಪುಂಡನ ಪುಂಡಾಟ್ಕ, ಹಿಡಮಂದಿ ಕುಡ್ಯಾರ ಕಂಡಲ್ಲಿ ಕಲ್ಲಿಗೆ ಬಡಿದಾರ ರಾತ್ರ್ಯಾಗ ಅಗಸರ ಕಲ್ಲಾಗ ತುರುಕ್ಯಾರ ಜೋಕುಮಾರ. 

ಜಂಗಮ ನಾನಲ್ಲ ಜೋಗಯ್ಯ ನಾನಲ್ಲ ತಿಂಗಳಿಗೆ ಬರುವ ತಿರುಕಲ್ಲ ತಾಯವ್ವಾ ಮರತುಂಬಿ ಜ್ವಾಳ ನೀಡಿವ್ವ ನಾ ಜೋಕುಮಾರ. ಈ ಸುಂದರವಾದ ಹಾಡನ್ನು ಶಾಂತಾಬಾಯಿ ನಾಟೀಕಾರ ಮತ್ತು ಸಂಗಡಿಗರು ಹಾಡುತ್ತಾ ಜೋಕುಮಾರನನ್ನು ಮನೆ ಮನೆಗೆ ಹೊತ್ತು ತರುತ್ತಾರೆ. ಇದೇ ರೀತಿ 7 ದಿನ  7 ಹಳ್ಳಿಗಳಿಗೆ ಹೋಗುತ್ತಾರೆ. ಹೀಗೆ ಹೊತ್ತ ತಂದ ಜೋಕುಮಾರ ಉಪ್ಪು,ಮೆಣಸಿನಕಾಯಿ,ಎಣ್ಣೆ,ಬೆಣ್ಣೆ,ಕಾಳುಕಡಿಗಳನ್ನು ಕೊಟ್ಟು ಜೋಕುಮಾರನ ಅಂಬಲಿ (ಹುಳಿನುಚ್ಚು)ಯನ್ನು ಪಡೆಯುತ್ತಾರೆ. ಈ ಅಂಬಲಿಯನ್ನು ರೈತರು ತಮ್ಮ ಬೇಳೆ ಹುಲುಸಾಗಿ ಬೆಳೆಯಲ್ಲಿ ಎಂದು ಹೋಲದಲ್ಲಿ ಚರಗ ಚೆಲ್ಲುತ್ತಾರೆ. 

ಜೋಕುಮಾರ ಸ್ವಾಮಿ ತನ್ನ ಜನ್ಮ ಪಡೆದ 7 ದಿನಗಳ ನಂತರ ಹಳ್ಳದ ಅಗಸರ ಕಲ್ಲಿನ ಕೆಳಗೆ ಇಡುತ್ತಾರೆ. ಅಗಸರು ಜೋಕುಮಾರನ ಸಾವನ್ನು ಕಂಡು 5 ದಿನ ಹಳ್ಳದಲ್ಲಿ ಬಟ್ಟೆ ತೊಳೆಯುದಿಲ್ಲ. ನಂತರ 5 ನೇ ದಿನ ತಿಥಿ ಮಾಡುತ್ತಾರೆ. ಸತ್ತ ಜೋಕುಮಾರನ ಶಿವನ ಮುಂದೆ ಲೋಕದ ಸಂಕಟವನ್ನು ಹೇಳುತ್ತಾರೆ. ಆಗ ಪರಶಿವನು ಕಣ್ತೆರೆದು ಮಳೆ ಸುರಿಸುತ್ತಾನೆ. ಆಗ ಜಲಾಶಯಗಳು ತುಂಬುತ್ತವೆ. ಎಂಬ ನಂಬಿಕೆ ನಮ್ಮ ಜನರಲ್ಲಿ ಇಂದಿಗೂ ಇದೆ.