ಕೌಶಲ್ಯಾಭಿವೃದ್ಧಿಯಿಂದ ಉದ್ಯೋಗಾವಕಾಶ: ಶಾಸಕ ನಾರಾ ಭರತ್ ರೆಡ್ಡಿ

ಕೌಶಲ್ಯಾಭಿವೃದ್ಧಿಯಿಂದ ಉದ್ಯೋಗಾವಕಾಶ: ಶಾಸಕ ನಾರಾ ಭರತ್ ರೆಡ್ಡಿ  Job opportunities through skill development: MLA Nara Bharath Reddy


ಬಳ್ಳಾರಿ, ಸೆ.16: ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಕೌಶಲ್ಯಾಭಿವೃದ್ಧಿ ಅತ್ಯುತ್ತಮ ವೇದಿಕೆಯಾಗಿದೆ. ಯುವಜನತೆ ಇದರ ಸದುಪಯೋಗ ಪಡೆದುಕೊಂಡರೆ ಉತ್ತಮ ಉದ್ಯೋಗ ಪಡೆಯಲು ಸಾಧ್ಯ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.  

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಕೌಶಲ್ಯ ತರಬೇತಿ ಪ್ರಮಾಣಪತ್ರ ವಿತರಣೆ ಹಾಗೂ ಉದ್ಯೋಗಾವಕಾಶಗಳ ಮಾಹಿತಿ ನೀಡುವ ಜಾಬ್ ಪೋರ್ಟಲ್‌’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಶೈಕ್ಷಣಿಕ ಅರ್ಹತೆಯ ಜತೆಗೆ ಅಗತ್ಯ ಕೌಶಲ್ಯಗಳನ್ನು ಹೊಂದಿರುವುದು ಮುಖ್ಯ. ಕೌಶಲ್ಯಗಳನ್ನು ಕಲಿಯುವ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ನೈಪುಣ್ಯತೆ, ವೃತ್ತಿಪರ ಸಾಮರ್ಥ್ಯ ಹಾಗೂ ಆರ್ಥಿಕವಾಗಿ ಸದೃಢರಾಗಬಹುದು ಎಂದು ಹೇಳಿದರು.  

ಸಂಜೀವರಾಯನಕೋಟೆ ಸಮೀಪ 600 ಎಕರೆ ಭೂಮಿಯಲ್ಲಿ ?5,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಜೀನ್ಸ್‌ ಗಾರ್ಮೆಂಟ್ ಪಾರ್ಕ್‌ ಆರಂಭಿಸಲು ಯೋಜಿಸಲಾಗಿದ್ದು, ಇದರಿಂದ ಬಳ್ಳಾರಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಶೇ.80ರಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.  ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ‘ಟಚ್ ಫಾರ್ ಲೈಫ್‌’ ಫೌಂಡೇಶನ್ ವತಿಯಿಂದ ?10 ಲಕ್ಷ ನೆರವು ನೀಡುವುದಾಗಿ ಘೋಷಿಸಲಾಯಿತು.  

ಸಂಸ್ಥೆಯ ಅಧ್ಯಕ್ಷ ಅವಾರು ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೌಶಲ್ಯವೇ ಯುವಜನರ ಭವಿಷ್ಯ ಎಂದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಸಾಕಾಗುವುದಿಲ್ಲ. ಉದ್ಯೋಗ ಕ್ಷೇತ್ರದ ಅಗತ್ಯಕ್ಕೆ ಅನುಗುಣವಾಗಿ ಪ್ರಾಯೋಗಿಕ ಜ್ಞಾನ, ತಾಂತ್ರಿಕ ಕೌಶಲ್ಯ ಹಾಗೂ ವೃತ್ತಿಪರ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.