ಜೈಲರ್ ಸಿದ್ದರಾಮಪ್ಪ ಸಾವಿನ ಪ್ರಕರಣ: ನ್ಯಾಯಸಮ್ಮತ ತನಿಖೆಗೆ ಸ್ವಾಮೀಜಿಗಳ ಆಗ್ರಹ
Jailer Siddaramappa's death case: Swamiji demands fair investigation
ಲೋಕದರ್ಶನ ವರದಿ
ರೊಣ 26: ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡು, ಇತ್ತೀಚೆಗಷ್ಟೇ ಮೈಸೂರಿಗೆ ವರ್ಗಾವಣೆಯಾಗಿದ್ದ ಜೈಲರ್ ಸಿದ್ದರಾಮಪ್ಪ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅವರ ಆಪ್ತ ವಲಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಸಿದ್ದರಾಮಪ್ಪ ಅವರ ನಿಧನದ ಸುದ್ದಿ ತಿಳಿದು ಭೋವಿ ಗುರುಪೀಠದ ಜಗದ್ಗುರುಗಳಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಗದಗ ಜಿಲ್ಲೆ ರೋಣ ತಾಲ್ಲೂಕಿನ ಸೂಡಿ ಗ್ರಾಮದಲ್ಲಿರುವ ಮೃತರ ನಿವಾಸಕ್ಕೆ ಭೇಟಿ ನೀಡಿದರು. ದುಃಖತಪ್ತ ಕುಟುಂಬಸ್ಥರನ್ನು ಭೇಟಿಯಾಗಿ, ಅವರಿಗೆ ಆತ್ಮಸ್ಥೈರ್ಯ ತುಂಬಿ ಸಾಂತ್ವನ ಹೇಳಿದರು.
ಮೇಲಾಧಿಕಾರಿಗಳ ವರ್ತನೆಗೆ ಶ್ರೀಗಳ ತೀವ್ರ ಅಸಮಾಧಾನ ಘಟನೆಯ ಕುರಿತು ತನಿಖೆ ಹಾಗೂ ಇಲಾಖೆಯ ಮೇಲಾಧಿಕಾರಿಗಳ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಇಲಾಖೆಯೊಳಗಿನ ಮಾನಸಿಕ ಕಿರುಕುಳದ ವಿರುದ್ಧ ಎಚ್ಚರಿಕೆ ನೀಡಿದರು."ಯಾವುದೇ ಅಧಿಕಾರಿಯ ಮೇಲೆ ಆರೋಪಗಳು ಕೇಳಿ ಬಂದಾಗ ಇಲಾಖೆಯು ಸೂಕ್ತವಾಗಿ ಸತ್ಯಶೋಧನೆ ನಡೆಸಬೇಕೇ ವಿನಃ ಮೇಲಾಧಿಕಾರಿಗಳು ಮಾನಸಿಕ ಕಿರುಕುಳ ನೀಡಬಾರದು. ಮೃದು ಮನಸ್ಸಿನವರು ಇಂತಹ ಆರೋಪಗಳನ್ನು ಸಹಿಸಲಾರದೆ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುವಂತಾಗುತ್ತದೆ.
ಅಧಿಕಾರಿಗಳು ಇಂತಹ ನಿರ್ಧಾರ ತಳೆದು, ಅವರನ್ನು ನಂಬಿದ ಕುಟುಂಬ ಬೀದಿಗೆ ಬೀಳಲು ಮೇಲಾಧಿಕಾರಿಗಳೇ ಕಾರಣವಾಗಬಾರದು." ಮುಂದುವರಿದು ಮಾತನಾಡಿದ ಶ್ರೀಗಳು, "ಪ್ರಾಮಾಣಿಕವಾಗಿ ಇರುವವರಿಗೆ ಸಮಾಜದಲ್ಲಿ ಆರೋಪ, ಅಪವಾದಗಳು ಎದುರಾದಾಗ ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿ ಬೇಕಾಗುತ್ತದೆ. ಎಂತಹದ್ದೇ ಕಠಿಣ ಪರಿಸ್ಥಿತಿ ಬಂದರೂ ಆತ್ಮ ಸ್ಥೈರ್ಯದಿಂದ ಇರಬೇಕೇ ಹೊರತು, ಯಾರೂ ಇಂತಹ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳಬಾರದು," ಎಂದು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು. ಒಡನಾಡಿಗಳಲ್ಲಿ ಆಘಾತ, ಕಂಬನಿಸಿದ್ದರಾಮಪ್ಪ ಅವರ ಆಕಸ್ಮಿಕ ಸಾವು ಅವರ ಒಡನಾಡಿಗಳು ಮತ್ತು ಸಹೋದ್ಯೋಗಿಗಳಲ್ಲಿ ತೀವ್ರ ದಿಗ್ಭ್ರಮೆ ಮೂಡಿಸಿದೆ.
"ಸಿದ್ದರಾಮಪ್ಪ ಅವರು ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿದ್ದರು. ಅವರು ಕರ್ತವ್ಯ ಲೋಪದ ಆರೋಪದಲ್ಲಿ ಸಿಲುಕಿದ್ದರು ಎಂಬುದನ್ನು ನಂಬಲು ಸಾಧ್ಯವೇ ಇಲ್ಲ" ಎಂದು ಅವರ ಆಪ್ತ ವಲಯದವರು ಕಣ್ಣೀರಿಟ್ಟಿದ್ದಾರೆ.ಎರಡು ತಿಂಗಳ ಹಿಂದೆ ನಡೆದಿದ್ದ ಅಮಾನತು ಹಾಗೂ ತದನಂತರದ ವರ್ಗಾವಣೆಯ ಘಟನೆಗಳೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪ್ರಕರಣದ ಕುರಿತು ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಈ ವೇಳೆ ಭೋವಿ ವಡ್ಡರ ಸಮಾಜದ ಜಿಲ್ಲಾ ಅಧ್ಯಕ್ಷ ತುಳಸಪ್ಪ ಪೂಜಾರ್, ಕಲಘಟಗಿ ತಾಲೂಕು ಅಧ್ಯಕ್ಷ ನರೇಶ್ ಮಲೆನಾಡು, ಭೋವಿ ಸಮಾಜದ ರಾಜ್ಯಾ ಕಾರ್ಯಧ್ಯಕ್ಷ ರವಿ ಪೂಜಾರಿ, ಹು-ಧಾ ಮಹಾನಗರ ಪಾಲಿಕೆ ನಾಮ ನಿರ್ದೇಶನ ಸದಸ್ಯ ಮಂಜುನಾಥ ಭೋವಿ, ನಿವೃತ್ತ ಜೈಲರ್ ಸಿದ್ಧಪ್ಪ, ಸೋಮಣ್ಣ ಬಂಡಿವಡ್ಡರ್, ದುರ್ಗಪ್ಪ ವಡ್ಡರ್, ಮಾರುತಿ ವಡ್ಡರ ಸೇರಿದಂತೆ ಸಮಾಜದ ಹಿರಿಯರು, ಬಾಂಧವರು ಮತ್ತಿತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 