ಅಬ್ಬಾಸ ಮೇಲಿನಮನಿಯವರ ಸಾಹಿತ್ಯ ಕಾರ್ಯವನ್ನು ಸರಿಯಾಗಿ ಗುರುತಿಸದಿರುವದು ವಿಷಾದನೀಯ

ಹುನಗುಂದ27: ಅಬ್ಬಾಸ ಮೇಲಿನಮನಿಯವರ ಸಾಹಿತ್ಯ ಕಾರ್ಯವನ್ನು ಸರಿಯಾಗಿ ಗುರುತಿಸದಿರುವದು ವಿಷಾದನೀಯ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಬೇಸರ ವ್ಯಕ್ತಪಡಿಸಿದರು.                                                                           

ಇಲ್ಲಿನ ಹೊನ್ನಕುಸುಮ ವೇದಿಕೆ (ಹೊಸವೇ) ಸಾಹಿತ್ಯ ಹಾಗೂ  ಲಲಿತ ಕಲಾ ವೇದಿಕೆ ಮತ್ತು ವಿಜಯ ಮಹಾಂತೇಶ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಅಬ್ಬಾಸ ಮೇಲಿನಮನಿ ಸಂಸ್ಮರಣ ಗ್ರಂಥ ಕಥಾತಪಸ್ವಿ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಪ್ರಾದೇಶಿಕತೆ, ಜಾತಿ ಧರ‌್ಮ ಕಾರಣಕ್ಕೆ ದಕ್ಷಿಣ ಕರ್ನಾಟಕದವರು ನಮ್ಮ ಸಾಹಿತ್ಯ ಪ್ರತಿಭೆಗಳನ್ನು ಕಡೆಗಣಿಸುತ್ತಿದ್ದಾರೆ ಎಂದರು. ಅಬ್ಬಾಸ ಅವರು ಕಥಾ ಲೋಕದಲ್ಲಿ ತಮ್ಮ ಸುತ್ತಲಿನ ಜನರ ಬದುಕಿನ ಬವಣೆಗಳನ್ನು ತಮ್ಮ ಸಾಹಿತ್ತ ಕಥಾ ಹಂದರದ ಮೂಲಕ ವಿಷಯವನ್ನು ವಿಸ್ತೃತಗೊಳಿಸುತ್ತಿದ್ದರು. ಹೀಗಿದ್ದರೂ ಕೂಡಾ ಅವರಿಗೆ ಸಲ್ಲಬೇಕಾದ ಗೌರವ ಸಿಗಲಿಲ್ಲ. ಈ ಕಥೆ ನಮ್ಮನ್ನು ಕಾಡುತ್ತಿದೆ. ಮೇಲಿನಮನಿ ಅವರಲ್ಲಿಯ ಅಭದ್ರತೆ, ಹಿಂಜರಿಕೆ ಹಾಗೂ ಸಂಕೋಚ ಭಾವನೆ ಅವರ ಸಾಹಿತ್ಯ ಸಂಪತ್ತಿಗೆ ಹಿನ್ನಡೆಯಾಯಿತು ಎಂದು ಘಂಟಿ ವಿವರಿಸಿದರು. ಸಾಹಿತಿ ಅಕ್ಬರ್ ಕಾಲಿಮಿರ್ಚಿ ಮಾತನಾಡಿ ಅಬ್ಭಾಸ ಅವರು ಬದುಕಿನಲ್ಲಿ ಸರಳತೆ ರೂಢಿಸಿಕೊಂಡಿದ್ದರು ಎಂದರು. ಸಾಹಿತಿ ವಾಣಿಜ್ಯ ತೆರಿಗೆ ಅಧಿಕಾರಿ ಮಹಾಲಿಂಗ ಪೊಲ್ ಅವರು ಕಥಾತಪಸ್ವಿ ಸಂಸ್ಮರಣ ಗ್ರಂಥವನ್ನು ಪರಿಚಯಿಸಿದರು. ಗ್ರಂಥ ಸಂಪಾದಿಸಿದ ಕನ್ನಡ ಉಪನ್ಯಾಸಕ ಜಗದೀಶ ಹಾದಿಮನಿ ಸನ್ಮಾನಿಸಿ ಗೌರವಿಸಲಾಯಿತು. ಉಪನ್ಯಾಸಕ ಸಂಗಣ್ಣ ಮುಡಪಲದಿನ್ನಿ ಅಧ್ಯಕ್ಷತೆ ವಹಿಸಿದ್ದರು. ಎಂ.ಡಿ. ಚಿತ್ತರಗಿ ಹಾಗೂ ರವಿ ಹಾದಿಮನಿ ಸೇರಿದಂತೆ ಅನೇಕ ಸಾಹಿತಿಗಳು ಉಪಸ್ಥಿತಿರಿದ್ದರು.