ನವದೆಹಲಿ 13: ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಪಂಜಾಬ್ನ ಆದಮ್‌ಪುರ ವಾಯುನೆಲೆಗೆ ಭೇಟಿ ನೀಡಿದ್ದು, ಯೋಧರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಯೋಧರು ಸದ್ಯದ ಸ್ಥಿತಿಯ ಬಗ್ಗೆ ವಿವರಿಸಿದರು.
ಭೇಟಿಯ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಯೋಧರೊಂದಿಗಿನ ಫೋಟೊಗಳನ್ನು ಮೋದಿ ಹಂಚಿಕೊಂಡಿದ್ದಾರೆ.
‘ಇಂದು ಬೆಳಿಗ್ಗೆ, ನಾನು ಆದಮ್‌ಪುರಕ್ಕೆ ಹೋಗಿ ನಮ್ಮ ವೀರ ಯೋಧರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವವರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ಭಾರತಕ್ಕಾಗಿ ಮಾಡುವ ಪ್ರತಿ ಕೆಲಸಕ್ಕೂ ಇಡೀ ದೇಶ ಕೃತಜ್ಞವಾಗಿರುತ್ತದೆ’ ಎಂದು ಮೋದಿ ಬರೆದುಕೊಂಡಿದ್ದಾರೆ.
ಪಂಜಾಬ್ ನ ಆದಂಪುರ್ ಭಾರತೀಯ ವಾಯುಪಡೆ ನೆಲೆಯ ರನ್ ವೇಯನ್ನು ಧ್ವಂಸಗೊಳಿಸಿದ್ದೇವೆ ಎಂಬ ಪಾಕ್ ಆರೋಪ ಸುಳ್ಳು ಎಂಬುದು ಬಯಲಾಗಿದೆ. ಆದಂಪುರ್ ನೆಲೆಯಲ್ಲಿರುವ ಯುದ್ಧ ವಿಮಾನಗಳನ್ನು ಹಾಗೂ ರಾಡಾರ್ ನೆಲೆಯನ್ನು ಧ್ವಂಸಗೊಳಿಸಿರುವುದಾಗಿ ಪಾಕ್ ತಿಳಿಸಿತ್ತು. ಅಷ್ಟೇ ಅಲ್ಲ ತಮ್ಮ ದಾಳಿಯಲ್ಲಿ 60 ಮಂದಿ ಭಾರತೀಯ ಸೈನಿಕರು ಸಾವ*ನ್ನಪ್ಪಿರುವುದಾಗಿ ಹೇಳಿತ್ತು. ಆದರೆ ಈ ಎಲ್ಲಾ ಮಾಹಿತಿಯು ಸುಳ್ಳು ಎಂಬುದು ಜಗತ್ತಿಗೆ ಗೊತ್ತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯೋಧರ ಜತೆಗಿನ ಚರ್ಚೆ ವೇಳೆ ತಿಳಿಸಿದ್ದಾರೆ