ಸಂಬರಗಿಯಲ್ಲಿ ಮಾಜಿ ಸೈನಿಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

ಸಂಬರಗಿಯಲ್ಲಿ ಮಾಜಿ ಸೈನಿಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ  Independence Day celebration by the Ex-Servicemen's Association in Sambaragi


ಸಂಬರಗಿ 17 : ದೇಶ ಸೇವೆಯ ಪರಂಪರೆ ಹೊಂದಿರುವ ಸಂಬರಗಿ ಗ್ರಾಮದಲ್ಲಿ ಮಾಜಿ ಸೈನಿಕರ ಕಲ್ಯಾಣ ಅಭಿವೃದ್ಧಿ ಸಂಘದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ ವಾತಾವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಆರಂಭವಾಯಿತು. ಸಂಘಟನೆಯ ಉಪಾಧ್ಯಕ್ಷ ಹಾಗೂ ಮಾಜಿ ಸೈನಿಕ ಸುಭೇದಾರ್ ರಾಜು ರಾಮು ಬಂಡಗರ್ ಮತ್ತು ಹಿರಿಯ ಮಾಜಿ ಸೈನಿಕ ವಿದ್ಯಾಸಾಗರ ಕಾಂಬಳೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬಳಿಕ ಎಲ್ಲರೂ ‘ವಂದೇ ಮಾತರಂ’ ಹಾಗೂ ‘ಭಾರತ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗಿದರು. 

ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಸೈನಿಕ ಮಹಾದೇವ ಕಿಸನ್ ಪವಾರ್ ಅವರು ಉಪಸ್ಥಿತರಿದ್ದ ಹಿರಿಯ ಮಾಜಿ ಸೈನಿಕರು, ವೀರ ಸೈನಿಕರು, ವೀರ ನಾರಿಯರು ಹಾಗೂ ಗ್ರಾಮಸ್ಥರನ್ನು ಸ್ವಾಗತಿಸಿದರು. ಸಂಘಟನೆಯ ಸ್ಥಾಪನೆ, ಉದ್ದೇಶ ಹಾಗೂ ಇದುವರೆಗಿನ ಸಾಧನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ಹಿರಿಯ ಮಾಜಿ ಸೈನಿಕ ಗಣಪತಿ ಶಾಮರಾವ್ ವೈಫಳೆ ಅವರು ಸ್ವಾತಂತ್ರ್ಯ ದಿನದ ಮಹತ್ವ ಹಾಗೂ ಸಂಬರಗಿ ಗ್ರಾಮದ ದೇಶಸೇವೆಯ ಕೊಡುಗೆ ಕುರಿತು ಮಾರ್ಗದರ್ಶನ ನೀಡಿದರು. 1965 ಹಾಗೂ 1971ರ ಯುದ್ಧಗಳಲ್ಲಿ ಸಂಬರಗಿಯ ವೀರರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದ ಅವರು, ಯುವಕರು ಸೇನೆಗೆ ಸೇರುವಂತೆ ಪ್ರೇರಣೆ ನೀಡಿದರು.