ಬಣಜಿಗ ಸಮುದಾಯವನ್ನು ‘2ಎ’ ಪ್ರವರ್ಗಕ್ಕೆ ಸೇರಿಸಿ: ಬೀಳಗಿ ಬಣಜಿಗ ಸಮಾಜದ ಒತ್ತಾಯ

ಬಣಜಿಗ ಸಮುದಾಯವನ್ನು ‘2ಎ’ ಪ್ರವರ್ಗಕ್ಕೆ ಸೇರಿಸಿ: ಬೀಳಗಿ ಬಣಜಿಗ ಸಮಾಜದ ಒತ್ತಾಯ  Include Banajiga community in Category ‘2A’: Beelagi Banajiga Samaj urges

ಬೀಳಗಿ 08 : ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಬಣಜಿಗ ಸಮುದಾಯಕ್ಕೆ ಸೂಕ್ತ ಮೀಸಲಾತಿ ಕಲ್ಪಿಸುವ ಸಲುವಾಗಿ ಸಮುದಾಯವನ್ನು ಪ್ರವರ್ಗ 2ಎ ಅಡಿಯಲ್ಲೇ ಪರಿಗಣಿಸಿ ತಕ್ಷಣ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಬೀಳಗಿ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  ಸಮುದಾಯವನ್ನು ಉದ್ಯೋಗಕ್ಕಾಗಿ ಪ್ರವರ್ಗ ‘ಡಿ’ ಹಾಗೂ ಶಿಕ್ಷಣಕ್ಕಾಗಿ ಪ್ರವರ್ಗ ‘ಬಿ’ ಅಡಿಯಲ್ಲಿ ವರ್ಗೀಕರಿಸಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

ಸಂವಿಧಾನದ ಪರಿಚ್ಛೇದ 16(4)ರ ಅನ್ವಯ ಬಣಜಿಗ ಸಮುದಾಯವು ಶಿಕ್ಷಣ ಹಾಗೂ ಉದ್ಯೋಗ ಎರಡರಲ್ಲೂ ಮೀಸಲಾತಿಗೆ ಅರ್ಹವಾಗಿದ್ದು, ಗ್ರೂಪ್ ‘ಡಿ’ ಬದಲಿಗೆ ಗ್ರೂಪ್ ‘ಬಿ’ ಅಡಿಯಲ್ಲಿ ಮರುವರ್ಗೀಕರಿಸಬೇಕು ಎಂದು ಹೈಕೋರ್ಟ್ನ ವಿವಿಧ ತೀಪುಗಳನ್ನು ಉಲ್ಲೇಖಿಸಿದ್ದಾರೆ.  ಪ್ರಸ್ತುತ ಬಣಜಿಗ ಸಮುದಾಯವು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಜಾರಿಯಲ್ಲಿರುವ ನಿಯಮಗಳಿಂದಾಗಿ ಸರ್ಕಾರಿ ನೇಮಕಾತಿ ಹಾಗೂ ಉನ್ನತ ಶಿಕ್ಷಣದ ಪ್ರವೇಶದಲ್ಲಿ ಸಮುದಾಯದ ಯುವಕ-ಯುವತಿಯರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಸಂಘದ ಮುಖಂಡರು ಕಳವಳ ವ್ಯಕ್ತಪಡಿಸಿದರು.

ಆದ್ದರಿಂದ ರಾಜ್ಯ ಸರ್ಕಾರವು ಹೈಕೋರ್ಟ್‌ ತೀಪುಗಳನ್ನು ತಕ್ಷಣ ಜಾರಿಗೆ ತಂದು, ಗ್ರೂಪ್ ‘ಡಿ’ ಬದಲಿಗೆ ಗ್ರೂಪ್ ‘ಬಿ’   ಅಡಿಯಲ್ಲಿ ಬಣಜಿಗ ಸಮುದಾಯವನ್ನು ಮರುವರ್ಗೀಕರಿಸಿ ಸರ್ಕಾರಿ ಆದೇಶ ಹೊರಡಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಪದಾಧಿಕಾರಿಗಳು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಹೊಳಬಸು ಬಾಳಶೆಟ್ಟಿ, ತಾಲ್ಲೂಕು ಅಧ್ಯಕ್ಷ ಬಸವರಾಜ ಖೋತ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ನಾಗರಾಳ, ವೀರೇಂದ್ರ ಶಿಲವಂತ, ಸುಭಾಸ ಸವದಿ, ಮಲ್ಲಿಕಾರ್ಜುನ ಅಂಗಡಿ, ಮುತ್ತು ಅಂಗಡಿ, ಸಿದ್ದರಾಮ ಶಿರೋಳ, ಜಿ.ಎಂ. ನಾಗರಾಳ ಹಾಗೂ ಬಸವರಾಜ ಮಂಟೂರ ಉಪಸ್ಥಿತರಿದ್ದರು.