ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ

ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ  Inauguration of the cooperative society's new building

ಲೋಕದರ್ಶನ ವರದಿ 

ಕಾಗವಾಡ 26: ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜುಗೂಳ ಗ್ರಾಮದ  1008 ಆದಿನಾಥ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಇದೀಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಅಲ್ಪಾವಧಿಯಲ್ಲೇ ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.  

ಜುಗೂಳ ಗ್ರಾಮದಲ್ಲಿ ಬುಧವಾರ ನಡೆದ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿದ್ದು, ಸಾವಿರಾರು ಸಂಘ-ಸಂಸ್ಥೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಯುವಕರು ಸೇರಿ ಸ್ಥಾಪಿಸಿರುವ ಈ ಸಹಕಾರಿ ಸಂಘ ಇನ್ನಷ್ಟು ಪ್ರಗತಿ ಸಾಧಿಸಿ ರೈತರ ಹಾಗೂ ಸಾರ್ವಜನಿಕರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಶಿಸಿದರು.  

ಮಾಜಿ ಸಚಿವ ಶ್ರೀಮಂತ ಪಾಟೀಲ ನೂತನ ಕಟ್ಟಡ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಅರುಣ ಗಣೇಶವಾಡಿ ಹಾಗೂ ಆಡಳಿತ ಮಂಡಳಿಯ ಪರಿಶ್ರಮವನ್ನು ಶ್ಲಾಘಿಸಿ, ಸಂಘವು ಇದೇ ರೀತಿಯಲ್ಲಿ ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.  

ನಾಂದಣಿ ಜೈನ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು, ರಾಜಸ್ಥಾನ-ಜೈಪುರ ಜೈನ ಮಠದ ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯರು ಹಾಗೂ ಕಾಗವಾಡ ಗುರುದೇವಾಶ್ರಮದ ಪ.ಪೂ. ಯತೀಶ್ವರಾನಂದ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.  ಕಾರ್ಯಕ್ರಮದಲ್ಲಿ ಗಣ್ಯರು, ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.