ಕ್ರೀಡೆಗಳಿಂದ ಮಕ್ಕಳ ದೈಹಿಕ-ಮಾನಸಿಕ ಆರೋಗ್ಯ ವೃದ್ಧಿ
Improving children's physical and mental health through sports
ಲೋಕದರ್ಶನ ವರದಿ
ಧಾರವಾಡ, ಆ.25: ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ, ಶಕ್ತಿ ಹಾಗೂ ಜ್ಞಾನವನ್ನು ಬೆಳೆಸುತ್ತವೆ. ಮಲ್ಲಕಂಬದಂತಹ ದೇಶಿ ಕ್ರೀಡೆಗಳು ನಮ್ಮ ಭಾರತೀಯ ಸಾಂಪ್ರದಾಯಿಕ ಕ್ರೀಡೆಗಳಾಗಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿವೆ ಎಂದು ಲ್ಯಾಂಮಿಂಗ್ಟನ್ ಶಾಲಾ ಸುಧಾರಣಾ ಸಮಿತಿ ಕಾರ್ಯದರ್ಶಿ ಶಶಿಧರ ಸಾಲಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಹಾಗೂ ಕ್ರೀಡಾ ಮಂಡಳಿಯು ಹುಬ್ಬಳ್ಳಿಯ ಲ್ಯಾಂಮಿಂಗ್ಟನ್ ಪ್ರೌಢಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಕ್ರೀಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕೇವಲ ಓದು, ಸ್ಪರ್ಧೆ ಹಾಗೂ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ದೈಹಿಕ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ದೇಶಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡವರು ಆರೋಗ್ಯವಂತರಾಗಿದ್ದರು. ಆದರೆ ಇಂದು ಮಕ್ಕಳು ಹೆಚ್ಚು ಸಮಯವನ್ನು ಕೇವಲ ಅಧ್ಯಯನದಲ್ಲೇ ಕಳೆಯುತ್ತಿರುವುದರಿಂದ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ಅಗತ್ಯವಾಗಿದೆ ಎಂದರು.
ಧಾರವಾಡದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಮಾತನಾಡಿ, ನಿರಂತರ ಪ್ರಯತ್ನ ಹಾಗೂ ಅಭ್ಯಾಸದಿಂದ ಸಾಧನೆ ಸಾಧ್ಯ. ಮಕ್ಕಳು ದೊಡ್ಡ ಕನಸು ಕಾಣಬೇಕು ಮತ್ತು ಗುರಿ ಸಾಧಿಸುವ ಛಲ ಹೊಂದಬೇಕು. ಶಿಸ್ತು ರೂಢಿಸಿಕೊಂಡು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೋಷಕರು ಹಾಗೂ ಶಿಕ್ಷಕರಿಗೆ ಗೌರವ ನೀಡುವುದನ್ನು ಮಕ್ಕಳು ಕಲಿಯಬೇಕು. ಶಾಲಾ ಮಕ್ಕಳಿಗೆ ಕ್ರೀಡೆಗೆ ಅಗತ್ಯವಾದ ಸೌಲಭ್ಯಗಳನ್ನು ಇಲಾಖೆಯಿಂದ ಒದಗಿಸಲಾಗುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ಕ್ರೀಡಾಪಟುಗಳಾಗಿ ಬೆಳೆಯಬೇಕು. ಕ್ರೀಡಾ ಪ್ರಮಾಣಪತ್ರ ಹೊಂದಿರುವವರಿಗೆ ಸರ್ಕಾರದ ಉದ್ಯೋಗದಲ್ಲಿ ಶೇ.2ರಿಂದ 3ರಷ್ಟು ಮೀಸಲಾತಿ ದೊರೆಯುತ್ತದೆ ಎಂದು ತಿಳಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಸಾಂಪ್ರದಾಯಿಕ ಕ್ರೀಡೆಗಳನ್ನು ಯುವ ಪೀಳಿಗೆಗೆ ಪರಿಚಯಿಸಿ, ಅವುಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಸಂಘ ನಿರಂತರವಾಗಿ ಮಾಡುತ್ತಿದೆ ಎಂದರು.
ಸುನಿತಾ ಮುಳ್ಕಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಮಲ್ಲಕಂಬ ಅಕಾಡೆಮಿಯ ಸಂತೋಷ ಸನತಂಗಿ, ಸಲಹಾ ಸಮಿತಿ ಸದಸ್ಯೆ ಡಾ. ಪಾರ್ವತಿ ಹಾಲಭಾವಿ, ಜಯಲಕ್ಷ್ಮಿ ಉಮಚಗಿ ಉಪಸ್ಥಿತರಿದ್ದರು.
ಶಿಕ್ಷಕಿ ಭಾರತಿ ದೊಡ್ಡಮನಿ ಸ್ವಾಗತಿಸಿದರು. ಯುವಜನ ಹಾಗೂ ಕ್ರೀಡಾ ಮಂಡಳಿಯ ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಕರ್ನಾಟಕ ಮಲ್ಲಕಂಬ ಅಕಾಡೆಮಿ ಹಾಗೂ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 