ಜಿಲ್ಲೆಯಲ್ಲಿ ಮಾದರಿಯಾಗಿ ಸಂಜೀವಿನಿ ಯೋಜನೆ ಜಾರಿ: ಇಒ ಶ್ರೀಧರ್ ಚಿನಗುಂಡಿ

ಜಿಲ್ಲೆಯಲ್ಲಿ ಮಾದರಿಯಾಗಿ ಸಂಜೀವಿನಿ ಯೋಜನೆ ಜಾರಿ: ಇಒ ಶ್ರೀಧರ್ ಚಿನಗುಂಡಿ Implementation of Sanjeevini scheme as a model in the district: EO Sridhar Chinnagundi

 ನರಗುಂದ, ಜು.14: ಸಂಜೀವಿನಿ ಯೋಜನೆಯ ಎಲ್ಲ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಮಾದರಿಯಾಗಿ ನರಗುಂದ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಶ್ರೀಧರ್ ಚಿನಗುಂಡಿ ಸೂಚಿಸಿದರು.  ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಸಂಜೀವಿನಿ ಯೋಜನೆಯ ಮುಖ್ಯ ಪುಸ್ತಕ ಬರಹಗಾರರ ಪ್ರಗತಿ ಪರೀಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.  ಗ್ರಾಮೀಣ ಜನರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಜಾರಿಗೊಂಡಿರುವ ಸಂಜೀವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಿಬ್ಬಂದಿ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.  

ತಾಲ್ಲೂಕಿನಲ್ಲಿ ‘ಅಕ್ಕ ಕಫೆ’ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಉಪಾಹಾರ ಹಾಗೂ ನೈಸರ್ಗಿಕ ಆಹಾರ ಪದಾರ್ಥಗಳನ್ನು ಅಕ್ಕ ಕಫೆ ಮೂಲಕ ಸಾರ್ವಜನಿಕರಿಗೆ ತಲುಪಿಸಬೇಕು. ಸರ್ಕಾರಿ ವಿದ್ಯಾರ್ಥಿನಿಲಯಗಳು ಹಾಗೂ ವಿವಿಧ ಸರ್ಕಾರಿ ಕಾರ್ಯಕ್ರಮಗಳಿಗೆ ಅಕ್ಕ ಕಫೆಯ ಮೂಲಕ ಆಹಾರ ಪೂರೈಕೆ ಮಾಡಿದರೆ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ ಎಂದು ತಿಳಿಸಿದರು.  ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರದ ಸಂತೆಯನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು. ರೈತರು ಬೆಳೆದ ತರಕಾರಿಗಳನ್ನು ಸ್ವಸಹಾಯ ಸಂಘಗಳ ಮಹಿಳೆಯರು ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆ ರೂಪಿಸಿದರೆ ರೈತರು, ಮಹಿಳೆಯರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.  

ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಪಾರದರ್ಶಕವಾಗಿ ಬಳಸಬೇಕು. ಅರ್ಹ ಫಲಾನುಭವಿಗಳಿಗೆ ಮಾತ್ರ ಸಾಲ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು. ಸಾಲ ಮರುಪಾವತಿ, ಲೆಕ್ಕಪತ್ರ ನಿರ್ವಹಣೆ ಹಾಗೂ ದಾಖಲೆಗಳನ್ನು ನಿಯಮಿತವಾಗಿ ನವೀಕರಿಸುವಂತೆ ಸಿಬ್ಬಂದಿಗೆ ಸೂಚಿಸಿದರು.  ವಿಬಿಜಿ ರಾಮ್ ಜಿ ಯೋಜನೆಯ ಅನುಷ್ಠಾನದಲ್ಲಿಯೂ ಸಂಜೀವಿನಿ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ನರೇಗಾ ಯೋಜನೆಗೆ ನೀಡಿದ ಸಹಕಾರದಂತೆಯೇ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೂ ಸಹಕರಿಸುವಂತೆ ಕರೆ ನೀಡಿದರು.  

ಪ್ರತಿ ವಾರ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸಂಜೀವಿನಿ ಯೋಜನೆಯ ಪ್ರಗತಿ ಪರೀಶೀಲನಾ ಸಭೆ ನಡೆಸಿ ಗ್ರಾಮ ಪಂಚಾಯಿತಿ ಹಾಗೂ ಸಂಜೀವಿನಿ ಸಿಬ್ಬಂದಿ ನಡುವೆ ಸಮನ್ವಯ ಬೆಳೆಸಬೇಕು ಎಂದು ತಿಳಿಸಿದರು.  ಸಭೆಯಲ್ಲಿ ಜಿಲ್ಲಾ ವ್ಯವಸ್ಥಾಪಕ (ಕೃಷಿ ಜೀವನೋಪಾಯ) ಮಡ್ಡೇಶ ಮಲೀಮಾರ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮೋಹನಕೃಷ್ಣ, ಸಂಜೀವಿನಿ ಯೋಜನೆಯ ಸಿಬ್ಬಂದಿ ಹಾಗೂ ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳ ಮುಖ್ಯ ಪುಸ್ತಕ ಬರಹಗಾರರು ಉಪಸ್ಥಿತರಿದ್ದರು.