ಮಡಿಕೇರಿ, ಜ.16 : 'ಕಿರಿಕ್ ಪಾರ್ಟಿ' ಚಿತ್ರ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊಡಗು ಜಿಲ್ಲೆಯ ವೀರಾಜಪೇಟೆಯಲ್ಲಿರುವ ಅವರ ನಿವಾಸದ ಮೇಲೆ 10 ಐಟಿ ಆಧಿಕಾರಿಗಳ ತಂಡ ಮೂರು ಖಾಸಗಿ ವಾಹನಗಳಲ್ಲಿ ಬಂದಿದ್ದು, ಇಂದು ಬೆಳಗ್ಗೆ 7.30ಕ್ಕೆ ದಾಳಿ ನಡೆಸಿ,, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೆಲ ಸೂಪರ್ ಸ್ಟಾರ್ ಗಳ ಜೊತೆಗೆ ಚಿತ್ರದಲ್ಲಿ ನಟಿಸಿದ ನಂತರ ಟಾಲಿವುಡ್ ಗೆ ಪಾದಾರ್ಪಣೆ ಮಾಡಿರುವ ರಶ್ಮಿಕಾ, ಅಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ.
ಟಾಲಿವುಡ್ ನ ವಿಜಯ ದೇವರಕೊಂಡ, ಮಹೇಶ್ ಬಾಬು ಸೇರಿ ಹಲವು ಸೂಪರ್ ಸ್ಟಾರ್ ಗಳ ಜೊತೆಗೆ ರಶ್ಮಿಕಾ ತೆರೆಹಂಚಿಕೊಳ್ಳುತ್ತಿದ್ದು, ಅವರು ಚಿತ್ರಕ್ಕೆ ಪಡೆಯುವ ಸಂಭಾವನೆ ಹೆಚ್ಚಾದ ಹಿನ್ನೆಲೆಯಲ್ಲಿ ತೆರಿಗೆ ಸರಿಯಾಗಿ ಕಟ್ಟುತ್ತಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಐಟಿ ದಾಳಿ ನಡೆಸಿದೆ ಎನ್ನಲಾಗಿದೆ.
2016ರಲ್ಲಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಅಂಜನಿ ಪುತ್ರ, ಗೋಲ್ಡಾನ್ ಸ್ಟಾರ್ ಜೊತೆಗೆ ಚಮಕ್ ಹಾಗೂ ತೆಲುಗಿನ ಗೀತ ಗೋವಿಂದಂ, ದೇವದಾಸ್, ಡಿಯರ್ ಕಾಮ್ರೇಡ್, ಭೀಷ್ಮ ಚಿತ್ರಗಳಲ್ಲಿ ನಟಿಸಿದ್ದಾರೆ.ಸದ್ಯ ರಶ್ಮಿಕಾ ಅವರ ಮನೆ ಸೆರೆನಿಟಿಯಲ್ಲಿ ಐಟಿ ಅಧಿಕಾರಿಗಳು ದಾಖಲೆ ಮುಂದುವರೆಸಿದ್ದಾರೆ.
ಇನ್ನು ನಿತಿನ್ ರೆಡ್ಡಿ ಅವರ ಜೊತೆಗೆ ತೆಲುಗಿನ ಭೀಷ್ಮ ಹಾಗೂ ಧ್ರುವಾ ಸರ್ಜಾ ಜೊತೆಗಿನ ಪೊಗರು ಚಿತ್ರ ಬಿಡುಗಡೆಗೆ ಸಿದ್ಧಗೊಂಡಿವೆ. ಚಿತ್ರೀಕರಣದಲ್ಲಿ ತೊಡಗಿರುವ ರಶ್ಮೀಕಾ ಸದ್ಯ ಮನೆಯಲ್ಲಿ ಇಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.