ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ‌ ನಾನಲ್ಲ: ಡಿ.ಕೆ. ಶಿವಕುಮಾರ್

ಕಲಬುರಗಿ, ಜ 29 :     ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ತಾವಲ್ಲ ಎಂದು ಮಾಜಿ ಸಚಿವ ಡಿ.ಕೆ . ಶಿವಕುಮಾರ್ ತಿಳಿಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಅಲ್ಲದೇ, ತಾವು ಆ ಹುದ್ದೆಯ ಆಕಾಂಕ್ಷಿಯೂ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .

ದಿನೇಶ್  ಗುಂಡೂರಾವ್  ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅಲ್ಲದೇ, ಕೆಪಿಸಿಸಿ ಅಧ್ಯಕ್ಷ   ಸ್ಥಾನ ತಮಗೆ  ಬೇಕು ಎಂದು  ಅರ್ಜಿಯೂ ಹಾಕಿಲ್ಲ, ಯಾವುದೇ ಹುದ್ದೆ ಕೇಳಿಯೇ ಇಲ್ಲ ಎಂದು  ಸ್ಪಷ್ಟಪಡಿಸಿದರು.

ನಾನು ಕೇಳಿದರೇ,  ತಾನೇ ಯಾರಾದರೂ ಅಡ್ಡಗಾಲು ಹಾಕುವುದು ? ಎಂದ ಅವರು ಸದ್ಯ ದಿನೇಶ್ ಗುಂಡೂರಾವ್ ಅವರೇ ನಮ್ಮ ನಾಯಕರು. ಅವರು ಹೇಳಿದಂತೆ ಕೆಲಸ ಮಾಡುವುದಷ್ಟೇ ನಮ್ಮ ಕೆಲಸ ಎಂದರು. 

ಮನಸ್ಸಿದ್ದಲ್ಲಿ ಮಾರ್ಗವಿದೆ. ಭಕ್ತಿಯಿದ್ದಲ್ಲಿ ಭಗವಂತನಿದ್ದಾನೆ. ಆದ್ದರಿಂದ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ, ದರ್ಶನ ಪಡೆಯುತ್ತಿದ್ದೇನೆ. 

ಗೋನಾಳ ಜಾತ್ರೆಗೆ ಬರುವುದಾಗಿ ಹರಕೆ ಹೊತ್ತುಕೊಂಡಿದ್ದೆ. ಆದರೆ, ಬರುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಈಗ ಬಂದು ಹರಕೆ ತೀರಿಸುತ್ತಿರುವೆ ಎಂದರು.

ಬಿಜೆಪಿ ಸಚಿವ ಸಂಪುಟ ಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ‌. ಅವರು ಯಾವಾಗ ಬೇಕಾದರು ವಿಸ್ತರಣೆ ಮಾಡಿಕೊಳ್ಳಲಿ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ  ಮಿನಿಮಿನಿ ಪೌಡರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, 

ಮಿನಿಮಿನಿ ಎಂದರೆ ತಪ್ಪಾಯಿತಾ? ನನ್ನ ಮುಖವು ಮಿನಿಮಿನಿ ಹಾಗಿದೆ ಎನ್ನುವ ಮೂಲಕ‌ ಕುಮಾರಸ್ವಾಮಿ ಅವರ ಹೇಳಿಕೆಗೆ ಬೆಂಬಲ‌ ಸೂಚಿಸಿದರು. 

ಮಾಜಿ  ಮುಖ್ಯಮಂತ್ರಿ ಸಿದ್ದರಾಮಯ್ಯ  ಹಾಗೂ ಡಾ ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರ ಕುರಿತು  ಮಾತನಾಡಿದ ಅವರು,  ಅಯ್ಯೋ ಇದರಲ್ಲಿ ತಪ್ಪೇನಿದೆ ?  ಅವರಿಬ್ಬರೂ ಬಿಜೆಪಿನವರಾ ? ನಮ್ಮ  ಕಾಂಗ್ರೆಸ್ ಪಕ್ಷದ ನಾಯಕರು.  ಒಬ್ಬರನ್ನೊಬ್ಬರು ಭೇಟಿ ಮಾಡಿ ಕಾಫಿ ಕುಡಿಯಬಾರದಾ ? ಎಂದು  ಪ್ರಶ್ನಿಸಿದರು.