ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್‌ಎಸ್‌ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್

ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್‌ಎಸ್‌ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ Husband killed for insurance money: 9 people including wife, FSL officer arrested

ಬೆಳಗಾವಿ : 2 ಕೋಟಿ ವಿಮೆ ಹಣ ಪಡೆಯುವ ಆಸೆ ಹಿನ್ನೆಲೆ ಪ್ರೀಯಕರನ ಜೊತೆ ಸೇರಿ ಪತಿ ಸಂದೀಪನಿಗೆ ಚುಚುಮದ್ದು ನೀಡಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸುಮಾ ಅವಳ ಪ್ರೀಯಕರ ಹಾಗೂ ಎಫ್‌ಎಸ್‌ಎಲ್ ಅಧಿಕಾರಿ, ಸಿಬ್ಬಂದಿ ಸೇರಿ ಈ ಪ್ರಕರಣದಲ್ಲಿ ಈ ವರೆಗೆ 9 ಜನರನ್ನು ಬಂಧಿಸಲಾಗಿದೆ. ರಾಜ್ಯದಲ್ಲೇ ಇದೆ ಮೊದಲ ಬಾರಿಗೆ ಎಫ್‌ಎಸ್‌ಎಲ್ ಅಧಿಕಾರಿಗಳು ಕೊಲೆ ಕೇಸ್‌ನಲ್ಲಿ ಭಾಗಿಯಾಗಿ, ಮರಣೋತ್ತರ ಪರೀಕ್ಷೆ ವರದಿಯನ್ನೇ ತಿದ್ದುಪಡಿ ಮಾಡಿ ತಿರುಚಿ ಕೇಸ್ ದಿಕ್ಕು ತಪ್ಪಿಸಿರುವ ಪ್ರಕರಣ ಪತ್ತೆ ಮಾಡಲಾಗಿದೆ ಎಂದು ಬೆಳಗಾವಿ ಎಸ್‌ಪಿ ರಾಮರಾಜನ್ ಕೆ. ಅವರು ತಿಳಿಸಿದರು. 

   ತಮ್ಮ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಘಟಪ್ರಭಾ ಮತ್ತು ಯಮಕನಮರ್ಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಂಚಲನ ಮೂಡಿಸಿದ ಕೂಲೆ ಪ್ರಕರಣವೊಂದನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ, ಈ ಸಂಬಂಧ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 

     ಮೃತ ಸಂದೀಪ ಕಲಗೌಡ ಮಂಜರಗಿ (46) ಅವರು ಘೋಡಗೇರಿಯಲ್ಲಿ ನಿವೃತ್ತ ಸೈನಿಕರಾಗಿದ್ದರು. ಅವರ ಹೆಸರಿನಲ್ಲಿ ಎಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಬ್ಯಾಂಕ್‌ಗಳಲ್ಲಿ ವಿಮೆ ಮಾಡಿಸಲಾಗಿತ್ತು. ರಸ್ತೆ ಅಪಘಾತದಲ್ಲಿ ಮರಣ ಹೊಂದಿದರೆ ಸುಮಾರು 2 ಕೋಟಿ ರೂ. ವಿಮಾ ಹಣ ಬರುತ್ತದೆ ಎಂಬ ಧುರಾಸೆಯಿಂದ ಹತ್ಯೆ ಮಾಡಲಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಪತಿಯನ್ನು ಘಟಪ್ರಭಾದ ಜೆ.ಜಿ.ಕೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದಾಗ ಮೃತ ಸಂದೀಪನ ಪತ್ನಿ ಸುಮಾ ಮತ್ತು ಅವಳ ಪ್ರೀಯಕರ ಪುಂಡಲೀಕ ವಿಠಲ ಡೊಂಬರ ಸೇರಿ, ಆಸ್ಪತ್ರೆಯಲ್ಲಿ ಸಲೈನ್ ಬಾಟಲ್‌ನಲ್ಲಿ ವಿಷ ಬೆರೆಸಿ ಹಾಗೂ ನಿದ್ದೆ ಮಾತ್ರೆಗಳನ್ನು ಸೇವಿಸಲು ನೀಡಿ ಸಂದೀಪ ಅವರನ್ನು ಹತ್ಯೆ ಮಾಡಿದ್ದರು. 

    ನಂತರ, ಇದು ರಸ್ತೆ ಅಪಘಾತದಿಂದ ಆದ ಸಾವು ಎಂದು ಯಮಕನಮರ್ಡಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು. ಅಲ್ಲದೆ ಈ ಪ್ರಕರಣವನ್ನು ಮುಚ್ಚಿಹಾಕಲು ಮತ್ತು ಮರಣೋತ್ತರ ಪರೀಕ್ಷಾ ವರದಿಯಲ್ಲಿ ವಿಷದ ಅಂಶ ಕಂಡುಬರದಂತೆ ಮಾಡಲು, ಬೆಳಗಾವಿಯ ಆರ್‌ಎಫ್‌ಎಸ್‌ಎಲ್’ ಪ್ರಯೋಗಾಲಯದ ಸಿಬ್ಬಂದಿ ಹಾಗೂ ವೈದ್ಯರು ಸೇರಿದಂತೆ ಹಲವರನ್ನು ಬಳಸಿಕೊಂಡಿದ್ದರು. 

   ಆರ್‌ಎಫ್‌ಎಸ್‌ಎಲ್ ವರದಿಯಲ್ಲಿ ವಿಷದ ಅಂಶ ಬರದಂತೆ ಮಾಡಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. 

     ಬಳಿಕ‌ ಮೃತದೇಹವನ್ನು ಹೂತಿದ್ದ ಸ್ಥಳದಿಂದ ಹೊರತೆಗೆದು ಪುನಃ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳ ಮಾಹಿತಿ ಮೇರೆಗೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ (ಕಲಂ 103(1), 238(ಬಿ), 3(5) ಬಿಎನ್‌ಎಸ್) ಪರಿವರ್ತಿಸಿ ತನಿಖೆ ಕೈಗೊಳ್ಳಲಾಗಿದೆ. ಅಪರಾಧ ಕೃತ್ಯಕ್ಕೆ ಬಳಸಿದ ವಿಷದ ಬಾಟಲಿಗಳು, ಸಿರಿಂಜ್‌ಗಳು, ಮೊಬೈಲ್‌ಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇಲಾಖೆಯು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ತನಿಖೆ ಮುಂದುವರೆದಿದೆ ಎಂದರು.

   ವರದಿ ತಿದ್ದುಪಡಿಗೆ ಪೊಲೀಸ್ ಸಿಬ್ಬಂದಿಯೂ ಸಾಥ್ ನೀಡಿದ್ದರು. ಈ ಪ್ರಕರಣ ಸಂಬಂಧ ಯೋಧನ ಪತ್ನಿ ಸುಮಾ, ಆಕೆಯ ಪ್ರಿಯಕರ ಪುಂಡಲೀಕ. ಕೃತ್ಯಕ್ಕೆ ಸಾಥ್ ಕೊಟ್ಟ ಅಪ್ಪಾಸಾಬ್ ನಾಯಿಕವಾಡಿ, ಚನ್ನಪ್ಪಾ ಅಡವಿಸ್ವಾಮಿಮಠ, ನಾಗರಾಜು, ಅಶೋಕ ಗುಜನಾಳ, ಬಸವರಾಜ್ ಬಸ್ಮೆ, ರಾಹುಲ್ ಜೋಗಿ ಇವರನ್ನು ಬಂಧಿಸಲಾಗಿದೆ. ವಿಮೆ ಹಣ ಹಂಚಿಕೆ ವಿಚಾರದಲ್ಲಿ ಸುಮಾ ಹಾಗೂ ಪುಂಡಲೀಕ ನಡುವೆ ಜಗಳವಾಗಿದ್ದು, ಪ್ರೀಯಕರನ ತಗಾದೆ ಈ ಪ್ರಕರಣ ಪತ್ತೆ ಮಾಡುವಲ್ಲಿ ಸಹಕಾರಿ ಆಯಿತು ಎಂದು ತಿಳಿಸಿದರು. 

   ಎರಡು ಕೋಟಿ ಹಣಕ್ಕಾಗಿ ಪ್ರಿಯಕರ ಜೊತೆ ಸೇರಿ ಪತ್ನಿಯಿಂದ ಗಂಡನ ಕೊಲೆ ಪ್ರಕರಣ. ಕ್ರ್ಯಮ್  ವೆಬ್ ಸೀರೀಸ್ ನೇ ಮೀರಿಸುವಂತಿದೆ ಮಾಜಿ ಸೈನಿಕನ ಕೊಲೆ ಕೇಸ್. ಎಫ್‌ಎಸ್‌ಎಲ್‌ನಲ್ಲೇ ವರದಿ ತಿರುಚಿ ಕೊಲೆ ಕೇಸ್ ಮುಚ್ಚಿ ಹಾಕಿದ್ದು ಬಹಿರಂಗವಾಗಿದೆ. ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ. ಇದು ರಾಜ್ಯದಲ್ಲೇ ಇದೆ ಮೊದಲ ಬಾರಿಗೆ ಎಫ್‌ಎಸ್‌ಎಲ್ ಅಧಿಕಾರಿಗಳು ಕೊಲೆ ಕೇಸ್‌ನಲ್ಲಿ ಭಾಗಿಯಾಗಿದ್ದಾರೆ.

    ಮರಣೋತ್ತರ ಪರೀಕ್ಷೆ ವರದಿಯನ್ನೇ ಎಡಿಟ್ ಮಾಡಿ ತಿರುಚಿ ಕೇಸ್ ದಿಕ್ಕು ತಪ್ಪಿಸಿದ್ದು ಎಫ್‌ಎಸ್‌ಎಲ್ ಅಧಿಕಾರಿಗಳು ಭಾಗಿಯಾದ ವಿಚಾರ ಬಹಿರಂಗಗೊಂಡಿದೆ. 

ಬೆಳಗಾವಿಯ ಎಫ್‌ಎಸ್‌ಎಲ್ ಕಚೇರಿಯ ಸೀನಿಯರ್ ಸೈಂಟಿಫಿಕ್ ಆಫೀಸರ್ ಪಿಎನ್ ನಾಗರಾಜ್, ಲ್ಯಾಬ್ ಅಸಿಸ್ಟೆಂಟ್ ಚನ್ಯಯ್ಯ, ಗುಮಾಸ್ತ ಅಪ್ಪಾಸಾಬ್ ನಾಯಿಕ್, ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಎಫ್‌ಡಿಎ ಅಶೋಕ ಗುಜಾನಾಳ್ ಕೂಡ ಬಂಧನವಾಗಿದೆ. ಮೂರು ಲಕ್ಷ ಹಣ ಪಡೆದು ವರದಿಯನ್ನ ತಿರುಚಿದ್ದ ಎಫ್‌ಎಸ್‌ಎಲ್ ಅಧಿಕಾರಿಯು ಪೊಲೀಸ ಆಯುಕ್ತರ ಕಚೇರಿ ಎಫ್‌ಡಿಎ ಅಶೋಕ ಮೂಲಕ ಎಫ್‌ಎಸ್‌ಎಲ್ ಅಧಿಕಾರಿಗಳ ಸಂಪರ್ಕ ಮಾಡಲಾಗಿತ್ತು. ಕೊಲೆ ಆರೋಪಿ ಸುಮಾಳಿಂದ ಸಂಪರ್ಕ ಮಾಡಿ ಹಣ ಹಂಚಿಕೆ ಬಹಿರಂಗವಾಗಿದೆ.

   ಸದರಿ ಪ್ರಕರಣದಲ್ಲಿ ಮಾರ್ಗದರ್ಶನ ನೀಡಿದ ಗೋಕಾಕ ಡಿಎಸ್‌ಪಿ ರವಿ ನಾಯ್ಕ ಮತ್ತು ತನಿಖೆ ಕೈಕೊಂಡ ಯಮಕನಮರ್ಡಿ ಪಿಐ ಜಾವೀದ್ ಮುಶಾಪೂರೆ ಮತ್ತು ಘಟಪ್ರಭಾ ಪಿಐ ಮುಲ್ಲಾ ಇವರ ತನಿಖೆಯನ್ನು ಎಸ್‌ಪಿ ಅವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

   ಪತ್ರಿಕಾಗೋಷ್ಠಿಯಲ್ಲಿ ಗೋಕಾಕ ಡಿಎಸ್‌ಪಿ ರವಿ ನಾಯ್ಕ, ಪಿಐಗಳಾದ ಜಾವೀದ್ ಮುಷಾಪೂರೆ ಹಾಗೂ ಮುಲ್ಲಾ ಅವರು ಉಪಸ್ಥಿತರಿದ್ದರು.