ಹುಬ್ಬಳ್ಳಿ, ಏ.18, ಕೊರೊನಾ ವೈರಸ್ ರೆಡ್ ಜೋನ್ ಆಗಿ ಕಾಣಿಸಿಕೊಂಡ ವಾಣಿಜ್ಯ ನಗರಿಯಲ್ಲಿ ಶನಿವಾರ ಮತ್ತೊಂದು ಪ್ರಕರಣ ದಾಖಲಾಗಿದೆ. ಸೋಂಕಿತ-363 ವ್ಯಕ್ತಿಯ ರಕ್ತ ಹಾಗೂ ಕಫ್ ದ ಪರೀಕ್ಷೆಯಲ್ಲಿ ಸೋಂಕು ಇರುವುದರ ಬಗ್ಗೆ ಧೃಡವಾಗಿದೆ. ಸೋಂಕಿತ- 236 ರೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಕರಾಡಿ ಓಣಿಯ 63 ವರ್ಷದ ಪುರುಷರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಇವರನ್ನು ಸೋಂಕಿತ-363 ಎಂದು ಗುರುತಿಸಲಾಗಿದೆ , ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಪೀಡಿತ ವ್ಯಕ್ತಿ 44 ನೇ ವಾರ್ಡಿನ ವ್ಯಾಪ್ತಿಯ ಕರಾಡಿ ಓಣಿಯ ಕಮರಿಪೇಟೆ ಪೋಲಿಸ್ ಸ್ಟೇಷನ್ ಎದುರುಗಡೆ ಪ್ರದೇಶದ ನಿವಾಸಿಯಾಗಿದ್ದಾರೆ. ಅಲ್ಲದೆ ತೊರವಿಹಕ್ಕಲ ಖಬರಸ್ಥಾನದ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸೋಂಕಿತ- 236 ಹಾಗೂ ಇತರರ ಜೊತೆಗೂಡಿ ಮಾ.27 ರಂದು ಮುಲ್ಲಾ ಓಣಿಯ ಡಾಕಪ್ಪಾ ಸರ್ಕಲ್ ದಿಂದ ಕಾಳಮ್ಮನ ಅಗಸಿಯವರೆಗೆ ಹಾಗೂ ಕಮರಿಪೇಟೆ , ಆನಂದನಗರದಲ್ಲಿ ವಾಸ್ತವ್ಯ ಹೊಂದಿರುವ ಸಾರ್ವಜನಿಕರಿಗೆ ಉಚಿತವಾಗಿ ಆಹಾರ ಧಾನ್ಯವನ್ನು ವಿತರಿಸಿರುವುದು ಪರಿಶೀಲನೆ ವೇಳೆ ದೃಢಪಟ್ಟಿರುತ್ತದೆ.
ಈ ಅಂಶದ ಹಿನ್ನಲೆಯಲ್ಲಿ ಸೋಂಕಿತ-363 ಅವರನ್ನು ಸಂಪರ್ಕಿಸಿದ ಹಾಗೂ ಅವರಿಂದ ಆಹಾರ ಧಾನ್ಯವನ್ನು ಪಡೆದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದೆ.ಮಾ.20 ರಿಂದ ಇಲ್ಲಿಯವರೆಗೆ ತೊರವಿಗಲ್ಲಿಯ ಖಬರಸ್ಥಾನದಲ್ಲಿ ನಡೆದ ಪಾರ್ಥಿವ ಶರೀರಗಳ ಅಂತಿಮ ಕ್ರಿಯಾ ವಿಧಿವಿಧಾನಗಳಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.