ಜ್ಞಾನದಿಂದ ಶಕ್ತಿ ನಡತೆಯಿಂದ ಗೌರವ ಪ್ರಾಪ್ತಿ : ರಂಭಾಪುರಿ ಶ್ರೀ


ಕಲಘಟಗಿ: ಜೀವನದಲ್ಲಿ ಯಶಸ್ಸಿಗಿಂತಲೂ ಸಂತೃಪ್ತಿ ಮುಖ್ಯ. ಉನ್ನತಿಯಲ್ಲಿ ಶ್ರಮದ ಪಾಲು ದೊಡ್ಡದು. ಶ್ರಮ ಶ್ರದ್ಧೆಯಿದ್ದರೆ ಅದೃಷ್ಟ ತಾನಾಗಿಯೇ ಬಂದು ಸೇರುತ್ತದೆ. ಜ್ಞಾನದಿಂದ ಶಕ್ತಿ ನಡತೆಯಿಂದ ಗೌರವ ದೊರಕುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ಅವರು ನಗರದ ಶ್ರೀ ಹನ್ನೆರಡು ಮಠದಲ್ಲಿ ಜರುಗಿದ ಲಿಂ. ಮಡಿವಾಳ ಶ್ರೀಗಳವರ 31ನೇ ಪುಣ್ಯ ಸ್ಮರಣೋತ್ಸವ ಹಾಗೂ ರೇವಣಸಿದ್ಧ ಶ್ರೀಗಳವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ನೆರಳು ಹಣ್ಣು ನೀಡುವ ವೃಕ್ಷದಂತೆ ಲಿಂ. ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಬದುಕಿ ಬಾಳಿದವರು. ಅವರ ಸಹನೆ, ತಪಸ್ಸು, ಪರಿಶುದ್ಧವಾದ ಅವರ ಮನಸ್ಸು ಭಕ್ತ ಸಂಕುಲದ ಮೇಲೆ ಪ್ರಭಾವ ಬೀರಿದ್ದನ್ನು ಕಾಣುತ್ತೇವೆ. ಅವರು ನುಡಿದು ನಡೆದು ತೋರಿದ ದಾರಿ ಭಕ್ತ ಸಮುದಾಯಕ್ಕೆ ದಾರೀದೀಪ. ಕಿರಿ ವಯಸ್ಸಿನಲ್ಲಿ ಗುರುತ್ವಾಧಿಕಾರ ಸ್ವೀಕರಿಸಿದ ಇಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಇಂದು ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಸರಳ ಸಾತ್ವಿಕತೆಗೆ ಹೆಸರಾದ ಶ್ರೀಗಳು ಲಿಂ. ಶ್ರೀ ಮಡಿವಾಳ ಶಿವಾಚಾರ್ಯರ ಸತ್ಯ ಸಂಕಲ್ಪದಂತೆ ಮುನ್ನಡೆದು ಮಲೆನಾಡ ಪ್ರಾಂತ್ಯದಲ್ಲಿ ವೀರಶೈವ ಸಂಸ್ಕೃತಿ ಮತ್ತು ಗುರು ಪರಂಪರೆಯ ಆದರ್ಶಗಳನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ. ಓದಿದ ಪಾಠವನ್ನು ಮನುಷ್ಯ ಮರೆಯಬಹುದು. ಆದರೆ ಜೀವನದಲ್ಲಿ ಕಲಿತ ಪಾಠಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆಹಾರ, ಅರಿವೆ ಮತ್ತು ಆವಾಸಗಳನ್ನು ಬದಲಾಯಿಸಿದಾಕ್ಷಣ ನೆಮ್ಮದಿ ಸಿಗುತ್ತದೆ ಎನ್ನಲಾಗದು. ನಮ್ಮನ್ನು ನಾವು ಬದಲಾಯಿಸಿಕೊಂಡು ನಡೆದಾಗ ಜೀವನದಲ್ಲಿ ಪರಿವರ್ತನೆ ಸಾಧ್ಯವೆಂದು ತಿಳಿದ ರೇವಣಸಿದ್ಧ ಶ್ರೀಗಳವರು ಸದಾ ಕಾಯಕ ಯೋಗಿಗಳಾಗಿ ಶ್ರೀ ಮಠವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತಿದ್ದಾರೆ ಎಂದು ಹರುಷ ವ್ಯಕ್ತಪಡಿಸಿ ಶ್ರೀಗಳವರಿಗೆ ರೇಶ್ಮೆ ಮಡಿ ಹೊದಿಸಿ ಸ್ಮರಣಿಕೆ ನೀಡಿ ಫಲ ಪುಷ್ಪವಿತ್ತು ಶುಭ ಹಾರೈಸಿದರು.  

ಇದೇ ಸಂದರ್ಭದಲ್ಲಿ ಜಂಗಮ ಯೋಗಿ ರೇವಣಸಿದ್ಧ ನಾಮಾಂಕಿತವುಳ್ಳ ಸ್ಮರಣ ಸಂಪುಟವನ್ನು ಮಾಜಿ ಮುಖ್ಯ ಮಂತ್ರಿ-ಶಾಸಕ ಜಗದೀಶ ಶೆಟ್ಟರ್ ಬಿಡುಗಡೆಗೊಳಿಸಿದರು. ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರು ಪ್ರಾಸ್ತಾವಿಕವಾಗಿ ಮಾತನಾಡಿ ವೀರಶೈವ ಸಂಸ್ಕೃತಿ ಬೆಳೆದುಕೊಂಡು ಬಂದ ಪರಂಪರೆ, ಲಿಂಗೈಕ್ಯ ಮಡಿವಾಳ ಶ್ರೀಗಳ ಆದರ್ಶತೆ ಮತ್ತು ಇಂದಿನ ಶ್ರೀಗಳ ಸಿದ್ಧಿ ಸಾಧನೆಗಳ ಬಗೆಗೆ ಮಾಹಿತಿಯನ್ನು ನೀಡಿದರು. ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಧಾರವಾಡ ಉಸ್ತುವಾರಿ ಸಚಿವ ಹಾಗೂ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಮೋಹನ ಟೆಂಗಿನಕಾಯಿ, ಜಿ.ಎಂ. ಚಿಕ್ಕಮಠ, ಎಸ್‌.ಎಸ್‌.ಪಾಟೀಲ ಅದರಗುಂಚಿ, ಪ್ರಕಾಶ ಬೆಂಡಿಗೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಶಿರಕೋಳ ಗುರುಸಿದ್ಧೇಶ್ವರ ಶ್ರೀಗಳು, ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು, ಬ್ಯಾಹಟ್ಟಿ ಮರುಳಸಿದ್ಧ ಶ್ರೀಗಳು, ಮಣಕಟ್ಟಿ ವಿಶ್ವಾರಾಧ್ಯ ಶ್ರೀಗಳು, ಹುಬ್ಬಳ್ಳಿ ರಾಜಶೇಖರ ಶ್ರೀಗಳು, ಹಣ್ಣಿಕೇರಿ ರೇವಣಸಿದ್ಧ ಶ್ರೀಗಳು,  ಬೆಲವಂತರ ರೇವಣಸಿದ್ಧ ಶ್ರೀಗಳು, ಹನ್ನೆರಡು ಮಠದ ಉತ್ತರಾಧಿಕಾರಿ ನಾಗರಾಜ ದೇವರು, ಅಂತೂರ-ಬೆಂತೂರ ಕುಮಾರದೇವರು ಹಿರೇಮಠ ಪಾಲ್ಗೊಂಡು ನುಡಿ ಸೇವೆ ಸಲ್ಲಿಸಿದರು. ನೇತೃತ್ವ ವಹಿಸಿದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಾಧನೆಯ ಹಾದಿ ಮೊದಲು ಕಷ್ಟವಾದರೂ ಗುರಿ ಮುಟ್ಟಿದ ಮೇಲೆ ಆಗುವ ಆನಂದ ಅಪಾರ. ಜೀವನ ಎಂಬುದು ನದಿಯಂತೆ ನಿರಂತರ ಪಯಣ. ಸುರಕ್ಷಿತವಾಗಿ ಗುರಿತಲುಪಲು ಗುರು ದೇವನ ಆಶೀರ್ವಾದ ಸದಾ ಇರಬೇಕಾಗುತ್ತದೆ ಎಂದರು. “ಜಂಗಮ ಯೋಗಿ ರೇವಣಸಿದ್ಧ” ಸ್ಮರಣ ಸಂಪುಟದ ಸಂಪಾದಕರಾದ ಸವಣೂರಿನ ಡಾಽಽ ಗುರುಪಾದಯ್ಯ ಸಾಲಿಮಠ ಅವರಿಗೆ ಗೌರವ ಗುರುರಕ್ಷೆಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಹಣ ಹೆಸರುಗಳನ್ನು ಹೇಗಾದರೂ ಗಳಿಸಬಹುದು. ಪ್ರಾಮಾಣಿಕತೆ, ದಕ್ಷತೆ, ಶ್ರದ್ಧೆ ಮತ್ತು ಕ್ರಿಯಾಶೀಲತೆ ಸಂಪಾದಿಸುವುದು ಅಷ್ಟು ಸುಲಭವಲ್ಲ. ಸಚ್ಚಿಂತನಗಳಲ್ಲಿ ತೊಡಗಿಸಿಕೊಂಡಾಗ ತಾನಾಗಿಯೇ ಗೌರವ ಘನತೆಗಳು ಪ್ರಾಪ್ತವಾಗುತ್ತವೆ. ಇಂದಿನ ರೇವಣಸಿದ್ಧ ಶ್ರೀಗಳು ಮುಗ್ಧ ಭಾವನೆ ಸರಳ ವ್ಯಕ್ತಿತ್ವ ಹೊಂದಿ ಭಕ್ತ ಸಂಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದರು.  

ಸಮಾರಂಭದ ನಂತರ ನಗರದಲ್ಲಿ ಲಿಂ.ಮಡಿವಾಳ ಶ್ರೀಗಳವರ ಭಾವಚಿತ್ರ ಮೆರವಣಿಗೆ ಹಾಗೂ ಸಾರೋಟದಲ್ಲಿ   ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳವರ ಮೆರವಣಿಗೆ ವಾದ್ಯ ವೈಭವ ಕಳಸ ಕನ್ನಡಿಯೊಂದಿಗೆ ಸಂಭ್ರಮದಿಂದ ಜರುಗಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಮುತ್ತೈದೆಯರು, ವೀರಗಾಸೆ ಕಲಾವಿದರು, ಭಜನಾ ಮಂಡಳಿಗಳು ಪಾಲ್ಗೊಂಡು ಮೆರವಣಿಗೆಗೆ ಶೋಭೆ ತಂದರು.