ಬಳ್ಳಾರಿಯಲ್ಲಿ ಸಂಭ್ರಮದ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವ
ಬಳ್ಳಾರಿ 10: ಹೇಮರೆಡ್ಡಿ ಮಲ್ಲಮ್ಮ ಸಾಕ್ಷಾತ್ ಶ್ರೀಶೈಲ ಮಲ್ಲಿಕಾರ್ಜುನನ ಅನುಗ್ರಹಕ್ಕೆ ಪಾತ್ರಳಾದವರು ಸಮಸ್ತ ರೆಡ್ಡಿ ಕುಲದ ಧರ್ಮ ಉದ್ಧಾರ ಮಾಡಲು ಅವತರಿಸಿದ ಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಮೌಲ್ಯ ಮತ್ತು ತತ್ವಗಳ ಮಾರ್ಗದರ್ಶನದಲ್ಲಿ ಸಾಗೋಣ ಎಂದು ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪಾರ್ವತಿ ನಗರ ಬಡಾವಣೆಯ ಬಸವ ಭವನ ವೇದಿಕೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ, ಸಾಕ್ಷಾತ್ಕರಿಸಿಕೊಂಡ ಸಾಧ್ವಿ ಮಲ್ಲಮ್ಮ ವೇಮನ ಮಹಾಯೋಗಿಯಾಗಿ ಬದಲಾಗಲು ಪ್ರೇರಣೆಯಾದವರು ಎಂದು ಹೇಳಿದರು. ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾಸಾದ್ವಿಯಾದ ಹೇಮರೆಡ್ಡಿ ಮಲ್ಲಮ್ಮ ಎಲ್ಲರಿಗೂ ಆದರ್ಶ ಮಹಿಳೆಯಾಗಿದ್ದು, ಭಕ್ತಿ ಮಾರ್ಗದ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವರ ಮಹಿಮೆ ನಾಡಿಗೆ ಸಾರಿದ್ದಾರೆ. ಇಂದಿಗೂ ಕೂಡ ಆಂದ್ರ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಕಣ್ಣಿರು ಎಂಬ ಸ್ಥಳದಲ್ಲಿ ಹೇಮರೆಡ್ಡಿ ಮಲ್ಲಮ್ಮ ಅವರ ದೇವಸ್ಥಾನವನ್ನು ನೋಡಬಹುದು ಎಂದರು. ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಅಧ್ಯಾಪಕಿ ಸುಶೀಲ ಸಿರೂರು ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, 15ನೇ ಶತಮಾನದ ಪ್ರಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜನಮಾನಸದಲ್ಲಿ ತನ್ನ ಭಕ್ತಿ ಹಾಗೂ ಕಾಯಕದಿಂದ ಮನೆಮಾತಾಗಿದ್ದಾರೆ. ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು, ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ. ಹೇಮರೆಡ್ಡಿ ಮಲ್ಲಮ್ಮನ ಪವಾಡ ಹಾಗೂ ಭಕ್ತಿಯ ಕುರಿತು ಹಲವು ಪ್ರತೀತಿ ಹಾಗೂ ಕಥನಗಳಿವೆ.
ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮಳನ್ನು ರೆಡ್ಡಿ ಕುಲದ ಉದ್ಧಾರಕಳು ಎಂದು ಬಣ್ಣಿಸಿದ್ದಾರೆ. ಹೇಮರೆಡ್ಡಿ ಮಲ್ಲಮ್ಮ ಅವರು ಆಂದ್ರ್ರದೇಶದ ಶ್ರೀಶೈಲದ ದಕ್ಷಿಣ ದಿಕ್ಕಿನಲ್ಲಿರುವ ವೆಲ್ಲಟೂರು ಬಳಿಯ ರಾಮಪುರ ಗ್ರಾಮದ ಸುಸಂಸ್ಕೃತ ಮನೆತನದ ರಾಮರೆಡ್ಡಿ ಹಾಗೂ ಗೌರಮ್ಮ ದಂಪತಿಗಳಿಗೆ ಮಗಳಾಗಿ ಜನಿಸಿದರು. ಚಿಕ್ಕಂದಿನಿಂದಲೂ ಶಿವಭಕ್ತೆಯಾದ ಮಲ್ಲಮ್ಮ ತನ್ನ ಹದಿನಾರನೆ ವಯಸ್ಸಿಗೆ ಸಿದ್ದಾಪುರ ಸಂಸ್ಥಾನದ ಒಡೆಯ ಹೇಮರೆಡ್ಡಿ ಅವರ ಮೂರನೆ ಮಗ ಭರಮರೆಡ್ಡಿಯನ್ನು ಮದುವೆಯಾದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ವಿ.ಎಂ.ವೀರಭದ್ರಯ್ಯ ತಂಡದಿಂದ ವಚನ ಸಂಗೀತ ಪ್ರಸ್ತುತ ಪಡಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಮಹಾನಗರ ಪಾಲಿಕೆಯ ಸದಸ್ಯರಾದ ಸುರೇಖಾ ಮಲ್ಲನಗೌಡ, ಸಹಾಯಕ ಆಯುಕ್ತ ಪಿ.ಪ್ರಮೋದ್ ಸೇರಿದಂತೆ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಅಂಗವಾಗಿ ಏರಿ್ಡಸಿದ್ದ ಮೆರವಣಿಗೆಯು ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು. ಮೆರವಣಿಗೆಯು ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ ಎಸ್ಪಿ ಸರ್ಕಲ್ ಮೂಲಕ ಬಸವ ಭವನದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.