ನರೇಗಲ್ 10: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ಅವಧಿಗೆ ಬಿಸಿಎ, ಬಿಕಾಂ, ಬಿಎಸ್ಸಿ, ಬಿಎ ಸೇರಿದಂತೆ ವಿವಿಧ ಕೋರ್ಸ್ಗಳ ಕಲಿಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯುಸಿ ವಿಜ್ಞಾನ, ಕಾಮರ್ಸ್ ಪಾಸಾದ ವಿದ್ಯಾರ್ಥಿಗಳು ಬಿಸಿಎ ಪದವಿಗೆ, ಬಿಕಾಂ ಪದವಿಗೆ, ಪಿಯುಸಿ ವಿಜ್ಞಾನ ಪಾಸಾದ ವಿದ್ಯಾರ್ಥಿಗಳು ಬಿಎಸ್ಸಿಗೆ ಹಾಗೂ ಕಲಾ ವಿಭಾಗದಲ್ಲಿ ಪಾಸಾದ ವಿದ್ಯಾರ್ಥಿಗಳು ಬಿಎ ಪದವಿಗೆ ಪ್ರವೇಶ ಪಡೆಯಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿ ಕಾಲೇಜು ನ್ಯಾಕ್ ಬಿ+ ಗ್ರೇಡ್ ಹೊಂದಿದೆ. ಅಷ್ಟೇ ಅಲ್ಲದೆ ಬಿಸಿಎ ಪದವಿಗೆ ಎಐಸಿಟಿಇ ನ್ಯೂ ದೆಹಲಿಯಿಂದ ಮಾನ್ಯತೆ ಪಡೆದಿರುವ ಗದಗ ಜಿಲ್ಲೆಯ ಪ್ರಥಮ ಸರ್ಕಾರಿ ಕಾಲೇಜ ಇದಾಗಿದೆ. ಬೋಧನೆಗೆ ತಕ್ಕ ವಿದ್ಯಾರ್ಹತೆ, ಅನುಭವ ಹೊಂದಿರುವ ಹಾಗೂ ಉತ್ತಮ ಕೌಶಲ್ಯ ಹೊಂದಿರುವ ಪ್ರಾಧ್ಯಾಪಕರ ತಂಡವನ್ನು ಹೊಂದಿದೆ. ಸುಸಜ್ಜಿತ ಕಟ್ಟಡ, ಗ್ರಂಥಾಲಯ ವ್ಯವಸ್ಥೆ, 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು, ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಸೌಲಭ್ಯವನ್ನು ಹೊಂದಿದೆ.
ಕೇವಲ ಸರ್ಕಾರ ನಿಗದಿ ಪಡಿಸಿದ ಹಣದಲ್ಲಿ ಮಾತ್ರ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಕಾಲಕಾಲಕ್ಕೆ ಸರ್ಕಾರದಿಂದ ನೀಡಲಾಗುವ ವಿವಿಧ ಶೈಕ್ಷಣಿಕ ಯೋಜನೆಗಳ ಸೌಲಭ್ಯ, ವಿದ್ಯಾರ್ಥಿ ವೇತನ ಹಾಗೂ ಇತರೆ ಸೌಲಭ್ಯಗಳು ಲಭ್ಯವಿರುತ್ತವೆ. ಪಠ್ಯ ಬೋಧನೆಯ ಜೊತೆಗೆ ಪ್ರಾಯೋಗಿಕ, ವಿಶೇಷ ಉಪನ್ಯಾಸ, ಸ್ಪರ್ಧಾತ್ಮ ಪರೀಕ್ಷೆಗಳ ತಯಾರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಹಾಗಾಗಿ ಸರ್ಕಾರಿ ಕಾಲೇಜಿನಲ್ಲಿ ಲಭ್ಯವಿರುವ ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪದವಿ ಕೋರ್ಸ್ಗೆ ಪ್ರವೇಶ ಪಡೆದುಕೊಳ್ಳಬೇಕು ಎಂದು ಪ್ರಾಂಶುಪಾಲರು ತಿಳಿಸಿದರು.