ಹಂಪಿ ಉತ್ಸವ: ಅಂತಿಮ ಹಂತದ ಸಿದ್ಧತೆ ಪರೀಶೀಲಿಸಿದ ಜಿಲ್ಲಾಧಿಕಾರಿಗಳು

ಹೊಸಪೇಟೆ (ವಿಜಯನಗರ) ಜನವರಿ 31 : ಫೆಬ್ರವರಿ 2, 3 ಮತ್ತು 4ರಂದು ನಡೆಯಲಿರುವ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವದ ಅಂತಿಮ ಹಂತದ ಸಿದ್ಧತೆಗಳನ್ನು ಜಿಲ್ಲಾಧಿಕಾರಿಗಳಾದ ಎಂ.ಎಸ್‌.ದಿವಾಕರ ಅವರು ಜ.31ರಂದು ಪರೀಶೀಲಿಸಿದರು.  

ಹಂಪಿ ಉತ್ಸವ ನಡೆಯುವ ಮುಖ್ಯ ವೇದಿಕೆಯಾದ ಗಾಯಿತ್ರಿ ಪೀಠಕ್ಕೆ ತೆರಳಿದ ಜಿಲ್ಲಾಧಿಕಾರಿಗಳು ವೇದಿಕೆ, ಮಾಧ್ಯಮ ಕೇಂದ್ರ, ಗಣ್ಯರು, ಸಾರ್ವಜನಿಕರಿಗೆ ಕೂಡುವ ಆಸನಗಳ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ವೀಕ್ಷಣೆ ಮಾಡಿದರು.  

ಇದೆ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಹಂಪಿ ಉತ್ಸವಕ್ಕೆ ಎಲ್ಲಾ ರೀತಿಯ ವ್ಯವಸ್ಥೆಗಳು ಮಾಡಿಕೊಳ್ಳಲಾಗಿದೆ. ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ವೈಭವನ್ನು ಸಾರುವ ಈ ಕಾರ್ಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಕರ್ಷಕ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಅವರು ಮಾತನಾಡಿದ, ಹಂಪಿ ಉತ್ಸವಕ್ಕಾಗಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಹೊರ ಜಿಲ್ಲೆಗಳು ಹಾಗೂ ಇತರೆ ರೇಂಜ್‌ಗಳಿಂದ 4 ಜನ ಎ.ಸಿ.ಪಿ.ಗಳು, 4 ಹೆಚ್ಚುವರಿ ಪೊಲೀಸ್ ವೀಕ್ಷಕರು, 8 ಡಿ.ವೈ.ಎಸ್‌.ಸಿ., 32 ಇನ್ಸ್‌ಪೆಕ್ಟರ್, ಮಹಿಳಾ ಸಿಬ್ಬಂದಿಗಳು ಒಳಗೊಂಡತೆ 179 ಎ.ಎಸ್‌.ಐ., 910 ಹೆಡ್ ಕಾನ್ಸ್‌ಟೇಬಲ್, 500 ಜನ ಗೃಹ ರಕ್ಷಕದಳ, 100 ಜನ ಮಹಿಳಾ ಸಿಬ್ಬಂದಿ ಸೇರಿದಂತೆ 4 ಕೆ.ಎಸ್‌.ಆರ್‌.ಪಿ., 2 ಡಿ.ಆರ್‌., ಶ್ವಾನದಳ ನಿಯೋಜನೆ ಮಾಡಲಾಗಿದೆ. 19 ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಒನ್‌-ವೇ ವ್ಯವಸ್ಥೆಯನ್ನು ಸಹ ಜಾರಿ ಮಾಡಲಾಗುತ್ತಿದ್ದು, ಐದು ಸ್ಥಳಗಳಲ್ಲಿ ತುರ್ತು ಸ್ಪಂಧನೆ ಘಟಕಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದ್ದು, 112 ಸಂಖ್ಯೆಗೆ ಕರೆ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಕೆಲ ಪೊಲೀಸ್ ಅಧಿಕಾರಿಗಳು ಮಫ್ತಿನಲ್ಲಿ (ಸಿವಿಲ್ ಡರ್ಸ್‌) ಕಾರ್ಯನಿರ್ವಹಿಸುವರು ಎಂದು ಮಾಹಿತಿ ನೀಡುವರು.  

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.