*ಹಕ್ಕ ಬುಕ್ಕರು.. ವಾಲ್ಮಿಕಿ ಸಮುದಾಯದವರೋ ಅಥವಾ ಹಾಲುಮತದವರೋ ? ಹೀಗೊಂದು ಜಿಜ್ಞಾಸೆ*

ಮೊನ್ನೆ  ಲೋಕದರ್ಶನ ಪತ್ರಿಕೆಗೆ ವಾಲ್ಮೀಕಿ ಜಯಂತಿಯ ಪ್ರಯುಕ್ತ ನಾನೊಂದು ಲೇಖನ ಬರೆದಿದ್ದೆ. ಅದರಲ್ಲಿ ವಾಲ್ಮೀಕಿ ಸಮುದಾಯದ ಹುಟ್ಟು ಬೆಳವಣಿಗೆ ಮನೆತನಗಳು. ನಾಯಕರು ಅವರ ಸಾಧನೆ  ಹಾಗೂ ಅವರ ಮಹತ್ವ  ಪ್ರಸಿದ್ದಿಯ ಕುರಿತು ಮಾಹಿತಿ ಇತ್ತು. 
ನಾಯಕ. ವಾಲ್ಮೀಕಿ. ಬೇಡರು ಎಂದು ಕರೆಸಿಕೊಳ್ಳುವ ಈ ಸಮುದಾಯದ ವಿವಿಧ ಕಾಲದ ಮಹಾನ್ ವ್ಯಕ್ತಿಗಳ ಇತಿಹಾಸ ಸಾರುವ ಮಾಹಿತಿಯನ್ನೊಳಗೊಂಡ ಲೇಖನ ಅ .27ರ ಶುಕ್ರವಾರದಂದು ಲೋಕದರ್ಶನ ಪತ್ರಿಕೆಯಲ್ಲಿ ಪ್ರಕಟವಾಯಿತು. ಅನೇಕ ಓದುಗರು ಇತಿಹಾಸ ತಿಳಿದವರು ಹಾಗೂ ಸಮುದಾಯದ ಕಾಳಜಿಯುಳ್ಳವರೂ ಲೇಖನವನ್ನು ಓದಿ ಪ್ರತಿಕ್ರಿಸಿದರು. ಮತ್ತೆ ಕೂಲವರು ಓದಿ ಸುಮ್ಮನಾಗಿದ್ದಾರೆ.
ಪ್ರತಿಕ್ರಿಯಿಸಿದ ಕೆಲವರು ಲೇಖನದಲ್ಲಿ ಬರುವ ನಾಯಕ ಸಮುದಾಯದ ಮಹಾನ್ ವ್ಯಕ್ತಿಗಳಲ್ಲಿ ಭಾರತದ ಪ್ರಮುಖ ರಾಜಮನೆತನಗಳಲ್ಲಿ ಒಂದಾದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ ಬುಕ್ಕರೂ ಬೇಡ ಸಮುದಾಯದವರು. ನಾಯಕ ಸಮುದಾಯದವರು. ವಾಲ್ಮೀಕಿ ಸಮುದಾಯದವರು ಅಲ್ಲ. ಅವರು ಕುರುಬ ಸಮುದಾಯದವರು. ಹಾಲುಮತದ ಸಮುದಾಯದವರು. ಮತ್ತೊಮ್ಮೊ ಸಂಶೊಧನೆ ಮಾಡಿ ಇನ್ನೊಂದು ಲೇಖನ ಬರೆಯಿರಿ. ಎಂಬ ವಿಮರ್ಶಾತ್ಮಕ ಸಲಹೆಯನ್ನು ಕೊಟ್ಟರು. ಓದುಗರ ಸಲಹೆ ಸೂಚನೆಯನ್ನು ಪಾಲಿಸುವುದ ಬರಹಗಾರನ ಪ್ರಬುದ್ದತೆಗೆ ಹಿಡಿದ ಕೈಗನ್ನಡಿ ಎಂದು ಭಾವಿಸಿ ಮತ್ತೊಮ್ಮೆ ನಾನು ಬರೆದ ಲೇಖನವನ್ನು. ಹಾಗೂ ಲೇಖನಕ್ಕಾಗಿ ಓದಿದ ಆಕರ ಗ್ರಂಥಗಳನ್ನು ಪರಿಶೀಲಿಸಲಾರಂಭಿಸಿದೆ. ಅನೇಕ ವಿದ್ವಾಂಸರು ಹಕ್ಕ ಬುಕ್ಕರು ವಾಲ್ಮೀಕಿ ಸಮುದಾಯದವರು ಎಂದೇ ಉಲ್ಲೇಖಿಸಿದ್ದಾರೆ. ಮತ್ತು ಅವರ ಐತಿಹಾಸಿಕ ಹಿನ್ನಲೆಯನ್ನೂ ನೀಡಿದ್ದಾರೆ. ಇದರಿಂದಾಗಿ ಮತ್ತಷ್ಟೂ ಮಾಹಿತಿಯನ್ನು ಕಲೆಹಾಕೋಣ ಎಂದುಕೊಂಡು ಬೇರೆ ಬೇರೆ ಲೇಖಕರ ಸಂಶೋಧನಾ ಬರವಣಿಗೆಯನ್ನು ಓದಿದೆ. ಅವರಲ್ಲಿ ಪ್ರತಿಭಾವಂತ ಪತ್ರಕರ್ತರಾದ ರಮೇಶ್ ಹಿರೆಜಂಬೂರು ಅವರ *ಹಕ್ಕರಾಯ ಬುಕ್ಕರಾಯರ ಮೂಲವೇನು ?* ಎಂಬ ವಿಮರ್ಶಾತ್ಮಕ ಲೇಖನವನ್ನೂ ಓದಿದಾಗ ಹಕ್ಕ ಬುಕ್ಕರೂ ವಾಲ್ಮೀಕಿ ಸಮುದಾಯದವರು ಎಂದು ತಿಳಿದು ಬಂದಿದೆ.
ಎಪ್ರೆಲ್ 18/ 1336ರಂದು ವಿದ್ಯಾರಣ್ಯರ ಮಾರ್ಗದರ್ಶನದಂತೆ ಸಂಗಮ ವಂಶದ ಹಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸಂಸ್ಥಾಪನೆ ಮಾಡಿದರು ಎಂದು ನಮಗೆಲ್ಲಾ ತಿಳಿದು ಬರುತ್ತದೆ.  ಆದರೆ  ಹಕ್ಕ ಬುಕ್ಕರು ಕುರುಬರು ಅಥವಾ ಹಾಲುಮತದವರು ಎಂದು ಭಾವಿಸುವ ಕೆಲವರಿಗೆ ನನ್ನ ಅಧ್ಯಯನದ ದೃಷ್ಠಿಕೋನದಲ್ಲಿ ಹೇಳುವುದೆಂದರೆ ಅವರು ಐತಿಹಾಸಿಕವಾಗಿ ವಾಲ್ಮೀಕಿ ಸಮುದಾಯದವರು ಎಂದು.
ಹೇಗೆಂದರೆ ಜಗತ್ತಿನ ಶ್ರೀಮಂತ ಹಾಗೂ ಬಲಿಷ್ಥ ಸಾಮ್ರಾಜ್ಯವನ್ನು ಸ್ಥಾಪಿಸಿ ವೈಭವಯುತವಾಗಿ ಆಡಳಿತ ಮಾಡಿದವರಲ್ಲಿ ವಿಜಯನಗರ ಹಕ್ಕರಾಯ ಹಾಗೂ ಬುಕ್ಕರಾಯರು ಶ್ರೇಷ್ಥರು. ಇಂತಹ ಮನೆತನದ ಇತಿಹಾಸವನ್ನು ಕೆದಕಿದಾಗ ಅವರ ವಂಶಾವಳಿಯು ಹೀಗಿದೆ. ಹಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಆಡಳಿತ ಮಾಡುವುದಕ್ಕಿಂತಲೂ ಮುಂಚಿತವಾಗಿ ಆನೆಗುಂದಿ ಸಮೀಪದ ಕುಮ್ಮಟದುರ್ಗದಲ್ಲಿ *ಮುಮ್ಮಡಿ ಸಿಂಗನಾಯಕ* ಎಂಬುವನು ಕನಕಗಿರಿ ಸಂಸ್ಥಾನವನ್ನು ಕಟ್ಟಿಕೊಂಡು ಆಡಳಿತ ಮಾಡುತ್ತಿದ್ದನು. ಈತನ ಮಗ *ವೀರ ಕಂಪಿಲರಾಯನು* ತಂದೆಯ ನಂತರ ಆಡಳಿತ ಮುಂದುವರಿಸಿಕೊಂಡು ಬಂದನು. ಈತನಿಗೆ ಇಬ್ಬರು ಮಕ್ಕಳು ಗಂಡುಗಲಿ ಕುಮಾರರಾಮ ಹಾಗೂ ಮಾರೆವ್ವ. 
ಪಕ್ಕದ ಕುರುಗೋಡು ಸಂಸ್ಥಾನದ ಸಂಸ್ಥಾಪಕನಾದ ಬುಕ್ಕ ಭೂಪನಾಯಕನ ಮಗ ಸಂಗಮನು ವೀರ ಕಂಪಿಲರಾಯನ ಮಗಳು ಹಾಗೂ ಗಂಡುಗಲಿ ಕುಮಾರರಾಮನ ಸಹೋದರಿಯಾದ ಮಾರೆವ್ವಳನ್ನು ವಿವಾಹವಾದನು. ಇಲ್ಲಿಯವರೆಗೂ ಕುರುಗೋಡು ಸಂಸ್ಥಾನದ ಅರಸ ಎಂದು ಕರೆಸಿಕೊಳ್ಳುತ್ತಿದ್ದ ಸಂಗಮನು ಈಗ ಕುಮಾರರಾಮನ ಭಾವನಾದ್ದರಿಂದ *ಭಾವಸಂಗಮ* ಪ್ರಸಿದ್ದನಾದನು. ಹಾಗೂ ಗಂಡುಗಲಿ ಕುಮಾರರಾಮನು ಸಂಗಮನನ್ನು ತನ್ನ ಸೈನ್ಯದ ಸೇನಾಧಿಪತಿಯನ್ನಾಗಿ ನೇಮಿಸಿದನು. ಮುಂದೆ ಗಂಡುಗಲಿ ಕುಮಾರನ ಭಾವನಾಗಿ ವೀರ ಕಂಪಿಲರಾಯನ ಅಳಿಯನಾಗಿ ಕನಕಗಿರಿ ಸಂಸ್ಥಾನದ ಆಡಳಿತ ಮುಂದುವರೆಸಿ ತನ್ನ ಆಡಳಿತದ ವೈಖರಿಯನ್ನು ಮುಂದುವರೆಸಿದನು.
ಸಂಗಮ ಮತ್ತು ಐದು ಜನ ಮಕ್ಕಳಿದ್ದರು. ಹರಿಹರ (ಹಕ್ಕ) ಬುಕ್ಕ.  ಮಾರಪ್ಪ. ಮುದ್ದಪ್ಪ ಹಾಗೂ ಕೆಂಪಣ್ಣ ಎಂದು. ಮೊದಲ ಮಗ ಬುಕ್ಕನಿಗೆ ಸಂಗಮನು ತನ್ನ ಮಾವ ವೀರ ಕಂಪಿಲರಾಯನ ಹೆಂಡತಿಯ ಹೆಸರಾದ ಹರಿಹರದೇವಿಯ ಹೆಸರನ್ನೇ ನಾಮಕರಣ ಮಾಡಿದನು. ಬುಕ್ಕನಿಗೆ ತಂದೆ ಬುಕ್ಕ ಭೂಪಣ್ಣನ ಹೆಸರನ್ನು ನಾಮಕರಣ ಮಾಡುತ್ತಾನೆ. ಮೂರನೆ ಮಗನಿಗೆ ಹೆಂಡತಿಯ ಹೆಸರಾದ ಮಾರವ್ವವನ್ನು ಬದಲಿಸಿ ಮಾರಪ್ಪ ಎಂದು ನಾಮಕರಣ ಮಾಡುತ್ತಾನೆ. ಹೀಗೆ ಉಳಿದ ಮಕ್ಕಳಿಗೂ ತನ್ನ ಸಂಬಂಧಿಕರ ಹೆಸರನ್ನೇ ನಾಮಕರಣ ಮಾಡುತ್ತಾನೆ.
ಬಹಳ ಚುರುಕು ಸ್ವಭಾವದವರಾದ ಹಕ್ಕರಾಯ ಹಾಗೂ ಬುಕ್ಕರಾಯರು ತಂದೆಯಂತೆ ಚತುರಮತಿಗಳು. ಮುಂದೆ ತಂದೆ ಸಂಗಮನ ಹೆಸರಿನಲ್ಲಿ ಆಡಳಿತ ಮುಂದುವರೆಸಿ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸಂಸ್ಥಾಪನೆ ಮಾಡುತ್ತಾರೆ.
ಆನೆಗೊಂದಿಯ ಕುಮ್ಮಟ ನಗರದ ಕನಕಗಿರಿಯ ಮುಮ್ಮಡಿ ಸಿಂಗನಾಯಕನ ಮಗ ವೀರ ಕಂಪಿಲರಾಯನ ಮಗಳು ಮಾರೆವ್ವಳನ್ನೂ ಮದುವೆರಾಗಿ ಕನಕಗಿರಿಯ ವಾರಸುದಾರನಾಗುತ್ತಾನೆ. ಹಕ್ಕ ಬುಕ್ಕರಿಗೆ ಜನ್ಮದಾತನಾದ ಈತನು ವಾಲ್ಮೀಕಿ ಬೇಡ ಅಥವಾ ನಾಯಕ ಸಮುದಾಯದವನೆಂದು ತಿಳಿದು ಬರುತ್ತದೆ. ತಂದೆಯ ವಂಶದವರಾದ ಹಕ್ಕ ಬುಕ್ಕರು ಇದೆ ಸಮುದಾಯದವರೆಂಬುದು ಸರ್ವವಿಧಿತ. ಹಾಗಾಗಿ ಹಕ್ಕರಾಯ ಹಾಗೂ ಬುಕ್ಕರಾಯ ವಾಲ್ಮೀಕಿ/ಬೇಡ/ನಾಯಕ ಸಮುದಾಯದವರೆಂದು ನಂಬಲಾಗಿದೆ.
ರಾಜ್ಯದ ಆಡಳಿತ ಸುಭೀಕ್ಷೆಯಿಂದ ಕೂಡಿರಲು ದೇವಿಯ ರಕ್ಷಣೆ ಬೇಕೆಂದು *ರಾಯಮ್ಮ* ಎಂಬ ಆರಾಧ್ಯ ದೇವತೆಯನ್ನು ಪೂಜಿಸಲಾರಂಭಿಸಿ ತಮ್ಮ ಹೆಸರಿನ ಮುಂದೆ *ರಾಯ* ಎಂಬುದನ್ನು ಸೇರಿಸಿಕೊಂಡರು. ರಾಯ ಎಂದರೆ ಒಡೆಯ. ರಾಜ. ನಾಯಕ ಎಂದು ಅರ್ಥ. ನಾಡನ್ನು ರಕ್ಷಿಸುವ ತಾಯಿ ರಾಯಮ್ಮಳು ರಾಜಮಾತೆ ಎಂದು ಕರೆಸಿಕೊಳ್ಳುತ್ತಾಳೆ. ಆದ್ದರಿಂದ ಹಕ್ಕ ಬುಕ್ಕರು ರಾಜರಾದ್ದರಿಂದ ರಾಯ ಎಂಬ ಪದವನ್ನು ಸೇರಿಸಿಕೊಂಡು ಹಕ್ಕರಾಯ ಬುಕ್ಕರಾಯ ಎಂದಾದರು. ಪ್ರಾಚೀನ ಕಾಲದಿಂದಲೂ ಕುಮ್ಮಟ ದುರ್ಗದ ಕನಕಗಿರಿಯಲ್ಲಿ ವಾಲ್ಮೀಕಿ ಸಮುದಾಯದವರು ಆಡಳಿತ ಮಾಡಿಕೊಂಡು ಬಂದಿದ್ದಾರೆ ಎಂದು ಚಿತ್ರದುರ್ಗ ಹಾಗೂ ತುಮಕೂರಿನಲ್ಲಿರುವ ಅನೇಕ ಶಿಲಾಶಾಸನಗಳು ಪುರಾವೆಗಳಾಗಿ ದೊರಕಿವೆ.
ಭವ್ಯ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಆಳಿದ ಮೊದಲ ವಂಶವೇ ಸಂಗಮ ವಂಶವಾದ್ದರಿಂದ ಹಾಗೂ ಈ ವಂಶದ ಮೂಲ ಪುರುಷರೂ ವಾಲ್ಮೀಕಿ ಸಮುದಾಯದವರಾದ್ದರಿಂದ ಸಂಗಮ ಮಾರವ್ವ ಹಾಗೂ ಹಕ್ಕ ಬುಕ್ಕರೂ ವಾಲ್ಮೀಕಿ ಸಮುದಾಯದವರು ಎಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.ಮತ್ತು ದಾಖನೆಗಳು ಸ್ಮಾರಕಗಳು ಶಾಸನಗಳೂ ಇದನ್ನು ಸಾಬೀತುಪಡಿಸುವುದರಿಂದ ಹಕ್ಕರಾಯ ಬುಕ್ಕರಾಯರು ಬೇಡ ಸಮುದಾಯದವರೆಂದು ಗುರುತಿಸಬಹುದಾಗಿದೆ. ಮತ್ತಷ್ಟೂ ಸಂಶೋಧನೆಗಳ ಮೂಲಕ ಅವರ ಇತಿಹಾಸವನ್ನು ಸ್ಪಷ್ಟ ಮತ್ತು ನಿಖರಗೊಳಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇತಿಹಾಸಕಾರರ. ಸಂಶೋಧಕರ ಹಾಗೂ ಬರಹಗಾರರ ದಾಖಲೆಗಳನ್ನು ಪರಿಶೀಲಿಸಿ ಹಕ್ಕರಾಯ ಹಾಗೂ ಬುಕ್ಕರಾಯರ ಮೂಲವನ್ನು ನಿಖರಗೊಳಿಸುವ ಪ್ರಯತ್ನ ಮಾಡುವೆ.

-ವೆಂಕಟೇಶ ಈಡಿಗರ
ರಾಣೇಬೆನ್ನೂರು
900869831