ಸಿದ್ದರಾಮಯ್ಯರಿಂದ ನೀರಾವರಿಗೆ ಹೆಚ್ಚಿನ ಆದ್ಯತೆ: ನಂಜಯ್ಯನಮಠ
ಗುಳೇದಗುಡ್ಡ 30: ಸಿದ್ದರಾಮಯ್ಯನವರು ಕ್ಷೇತ್ರದ ಶಾಸಕರಾದ ಸಾಕಷ್ಟು ಅಭೀವೃದ್ಧಿ ಕೆಲಸಗಳಾಗಿವೆ. ಅಲ್ಲದೇ ತಾಲೂಕಿನಲ್ಲಿ ನೀರಾವರಿ ಕ್ಷೇತ್ರ ಅಭಿವೃದ್ಧಿಗೆ ಸಿದ್ದರಾಮಯ್ಯನವರು ಸಾಕಷ್ಟು ಅನುದಾನ ತಂದಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಕೆರೆಗಳಿಗೆ ನೀರು ಹರಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣಕ್ಕೆ ಬಹುದಿನಗಳ ಬೇಡಿಕೆಯಾಗಿದ್ದ ಜವಳಿಪಾರ್ಕ್ ಸ್ಥಾಪನೆ ಮಾಡುವಲ್ಲಿ ಸಿದ್ಧರಾಮಯ್ಯನವರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಪ್ರಯತ್ನದ ಫಲವಾಗಿ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅಲ್ಲದೇ 12ಎಕರೆ ಭೂಮಿಯನ್ನು ಸಹ ಒದಗಿಸಲು ಒಪ್ಪಿದ್ದು, ಸ್ವಾಗತಾರ್ಹ ವಿಷಯವಾಗಿದೆ. ಸಿದ್ದರಾಮಯ್ಯನವರಿಗೆ ಜನತೆಯ ಪರವಾಗಿ ಅಭಿನಂದನೆಗಳು ಎಂದು ಹೇಳಿದರು.
ಜವಳಿ ಪಾರ್ಕ್ ಸ್ಥಾಪನೆಯಾಗಿದ್ದು, ಗುಳೇದಗುಡ್ಡ ನೇಕಾರರು ನೇಕಾರಿಕೆಯಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಬೇಕು. ಗುಳೇದಗುಡ್ಡ ಖಣ, ಇಲಕಲ್ ಸೀರೆ ಅಷ್ಟೇ ಅಲ್ಲದೇ ಅದರ ಜೊತೆಗೆ ಬನಿಯನ್, ಜಿನ್ಸ್ ಸೇರಿದಂತೆ ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ತಯಾರಿಸಲು ಮುಂದಾಗಬೇಕು. ಅಲ್ಲದೇ ನೇಕಾರರಿಗೆ ಆ ನಿಟ್ಟಿನಲ್ಲಿ ಸರಕಾರವು ಸಹ ತರಬೇತಿ ಕೊಡಬೇಕು. ಖಾಸಗಿ ಸಹಭಾಗಿತ್ವದವರು ಹೊಸ ವಿನ್ಯಾಸಗಳಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಬಾದಾಮಿ ಕ್ಷೇತ್ರಕ್ಕೆ ಸಿದ್ದರಾಮಯ್ಯನವರು ಕ್ಷೇತ್ರದ ಶಾಸಕರಾದ 18 ಕೋಟಿಯಲ್ಲಿ ಯಾತ್ರಿ ನಿವಾಸ, 525ಕೋಟಿ ವೆಚ್ಚದಲ್ಲಿ ಕೆರೂರ ಏತನೀರಾವರಿ, 257 ಕೋಟಿ ವೆಚ್ಚದಲ್ಲಿ ಬಾದಾಮಿ ಕೆರೂರ ಕುಡಿಯುವ ನೀರಿನ ಯೋಜನೆ, ಮಂಗಳಗುಡ್ಡ ಬ್ಯಾರೇಜ್‌ಗೆ 10ಕೋಟಿ, 29 ಕೋಟಿ ವೆಚ್ಚದಲ್ಲಿ ಟೂರಿಸಂ ಪ್ಲಾಜಾ, 12ಕೋಟಿ ವೆಚ್ಚದಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹೀಗೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ನಾನೂ ಆಕಾಂಕ್ಷಿ: ಬಾದಾಮಿ ಕ್ಷೇತ್ರಕ್ಕೆ ನಾನು ಕೂಡಾ ಆಕಾಂಕ್ಷಿಯಾಗಿದ್ದೇನೆ. ಸಿದ್ದರಾಮಯ್ಯನವರು ಪುನಃ ಬಾದಾಮಿಯಿಂದ ಸ್ಪರ್ಧಿಸಿದರೆ ನಾನು ಆ ಕ್ಷಣವೇ ನನ್ನ ಟಿಕೇಟ್ ಬೇಡಿಕೆಯ ಅರ್ಜಿ ಪಾರಂನ್ನು ಹರಿದು ಹಾಕುತ್ತೇನೆ. ಅಭಿವೃದ್ಧಿ ವಿಷಯವಾಗಿ ಸಿದ್ಧರಾಮಯ್ಯನವರು ಕ್ಷೇತ್ರಕ್ಕೆ ಅವಶ್ಯಕವಾದ್ದಾರೆ. ಅವರು ಶಾಸಕರಾದ ಮೇಲೆ ಕ್ಷೇತ್ರದ ಚಿತ್ರಣವೇ ಬದಲಾಗುತ್ತಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಮುಖಂಡ ಮುಬಾರಕ ಮಂಗಳೂರು, ಪುರಸಭೆ ಸದಸ್ಯ ರಫೀಕ ಕಲಬುರ್ಗಿ, ಎಸ್.ಎ.ಮೋಮಿನ, ರಜಾಕ ಕುದರಿ, ರಾಜು ಸಂಗಮ, ಮೆಹಬೂಬ ಸವರಾಜ ಸೇರಿದಂತೆ ಇತರರು ಇದ್ದರು.