ಉತ್ತರ ಕರ್ನಾಟಕದ ಕುರುಬ ಸಮುದಾಯಕ್ಕೂ ಸಚಿವ ಸ್ಥಾನ ನೀಡಿ: ವಿಜಯಪುರ ಜಿಲ್ಲಾ ಕುರುಬ ಸಮಾಜದ ಮುಖಂಡರ ಒತ್ತಾಯ
ವಿಜಯಪುರ 08 : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕ ಭಾಗದ ಕುರುಬ ಸಮುದಾಯದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ವಿಜಯಪುರ ಜಿಲ್ಲಾ ಕುರುಬ ಸಮಾಜದ ಮುಖಂಡರು ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೀರ್ಪ ಜುಮನಾಳ, ರಾಜ್ಯದಲ್ಲಿ ಕುರುಬ ಸಮುದಾಯದ 16 ಶಾಸಕರು ಆಯ್ಕೆಯಾಗಿದ್ದಾರೆ. ಸಮುದಾಯದ ಸಂಖ್ಯಾಬಲ ಹಾಗೂ ರಾಜಕೀಯ ಕೊಡುಗೆಯನ್ನು ಪರಿಗಣಿಸಿ ಕನಿಷ್ಠ ನಾಲ್ವರಿಗೆ ಸಚಿವ ಸ್ಥಾನ ನೀಡಬೇಕಿತ್ತು.
ಆದರೆ ಇದುವರೆಗೆ ಇಬ್ಬರಿಗೆ ಮಾತ್ರ ಅವಕಾಶ ದೊರೆತಿದ್ದು, ಉತ್ತರ ಕರ್ನಾಟಕ ಭಾಗದ ಒಬ್ಬರೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯದಿರುವುದು ಸಮುದಾಯಕ್ಕೆ ನಿರಾಸೆ ಉಂಟುಮಾಡಿದೆ ಎಂದು ಹೇಳಿದರು. ಸಮಾಜದ ಮುಖಂಡ ಹಾಗೂ ಜಿಲ್ಲಾ ಕೆಡಿಪಿ ಸದಸ್ಯ ಸತೀಶಕುಮಾರ ಅಡವಿ ಮಾತನಾಡಿ, ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ ಅವರ ಹೆಸರು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿತ್ತು. ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ಪಟ್ಟಿಯಲ್ಲಿಯೂ ಅವರ ಹೆಸರು ಇತ್ತು.
ಆದರೆ ಅಂತಿಮ ಹಂತದಲ್ಲಿ ನಡೆದ ಬೆಳವಣಿಗೆಗಳಿಂದ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ತಿಳಿಸಿದರು. ಇದೇ ವೇಳೆ, ಇನ್ನೂ ಎಂಎಲ್ಸಿಯಾಗಿ ಅಧಿಕಾರ ಸ್ವೀಕರಿಸದ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಸಚಿವ ಸ್ಥಾನದ ಪಟ್ಟಿಗೆ ಸೇರಿಸಿರುವುದು ಗೊಂದಲಕ್ಕೆ ಕಾರಣವಾಯಿತು. ಇದರಿಂದ ಉತ್ತರ ಕರ್ನಾಟಕದ ಕುರುಬ ಸಮುದಾಯಕ್ಕೆ ದೊರೆಯಬೇಕಿದ್ದ ಅವಕಾಶ ತಪ್ಪಿಹೋಗಿದೆ ಎಂದು ಅವರು ಆರೋಪಿಸಿದರು. ಆಗಿರುವ ತಪ್ಪನ್ನು ಸರಿಪಡಿಸಿ ಉತ್ತರ ಕರ್ನಾಟಕದ ಕುರುಬ ಸಮುದಾಯದ ಶಾಸಕರಾದ ಬಸವರಾಜ ಶಿವಣ್ಣನವರ್ ಅಥವಾ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.