ಲಿಂಗ ಸಮಾನತೆ ನಮ್ಮ ಹೊಣೆ : ಪ್ರೊ. ರೋನಿತ್ ಕಾರ್ಕ

Gender equality is our responsibility: Prof. Ronit Karka

ಹಂಪಿ 05: ಲಿಂಗ ಸಮಾನ ಜಗತ್ತನ್ನು ನಿರ್ಮಿಸುವ ಮಹಿಳೆಯರ ಜೊತೆಗೆ ಹೆಜ್ಜೆ ಹಾಕಲು ಪುರುಷರ ಬೆಂಬಲ ಅಗತ್ಯವಿದೆ ಎಂದು ಬಾರ್ಲಿಯಾನ್ ವಿಶ್ವವಿದ್ಯಾಲಯ, ಇಸ್ರೇಲ್ ಸ್ಕೂಲ್ ಆಫ್ ಬ್ಯುಸಿನೆಸ್, ಎಕ್ಸೆಟರ್ ವಿಶ್ವವಿದ್ಯಾಲಯ, ಯುಕೆ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರೋನಿತ್ ಕಾರ್ಕ ಅವರು ತಿಳಿಸಿದರು. 

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ವಿಭಾಗವು ದಿನಾಂಕ 4ನೇ ಮಾರ್ಚ್‌ 2025ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕೂಡಿ ಕಲಿಯುವುದು : ಸಂಘಟನೆ/ ಸಂಸ್ಥೆಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವುದರಲ್ಲಿ ಪುರುಷರ ಸಹಭಾಗಿತ್ವ ಎನ್ನುವ  ವಿಶೇಷ ಉಪನ್ಯಾಸವನ್ನು ನೀಡುತ್ತಾ ಮಾತನಾಡಿದ, ಅವರು ನಾವೆಲ್ಲರೂ ಸಮಸ್ಯೆಯ ಭಾಗವಾಗಿದ್ದೇವೆ ಅದನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಪ್ರಮುಖವಾಗಿ ಸ್ತ್ರೀಲಿಂಗ ವಿಷಯಗಳಿಗೆ ಸಂಬಂಧಿಸಿದ ಕ್ರಿಯಾಶೀಲತೆಯ ನಿರ್ದಿಷ್ಟ ಕ್ಷೇತ್ರಗಳಿವೆ, ಈ ಕ್ಷೇತ್ರಗಳಲ್ಲಿ ಅವರ ಸೀಮಿತ ಜ್ಞಾನ ಮತ್ತು ಅನುಭವದಿಂದಾಗಿ ಪುರುಷರು ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನೂ ಒಂದು ಹೆಣ್ಣಿಗೆ ಮನೆಯಲ್ಲಿ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ಸಿಕ್ಕರು ಹೊರಗಡೆ  ಪ್ರೋತ್ಸಾಹ ಸಿಗುವುದು ಕಡಿಮೆ. ಅನಾದಿಕಾಲದಿಂದಲೂ ಹೆಣ್ಣಿಗೆ ಗಂಡಿನ ಜೊತೆ ಬದುಕುವುದು ಅನಿವಾರ್ಯವಾಗಿದೆ. ಅವಳನ್ನು ಪ್ರೋತ್ಸಾಹ ಮಾಡುವ ನೆಪದಲ್ಲಿ “ನೀನು ಏನೇ ಮಾಡು ನಾವು ಹಿಂದೆ ಇರುತ್ತೇವೆ” ಎಂದು ಹೇಳುವ ಮೂಲಕ ಅವಳ ಸ್ವತಂತ್ರ ಆಲೋಚನೆಯನ್ನು ಕಸಿದುಕೊಳ್ಳುವ ಯತ್ನಗಳು ನಡೆಯುತ್ತಿವೆ. ಅವರು ಎಲ್ಲೇ ಇದ್ದರೂ ಅವಳಿಗೆ ಅಣ್ಣ, ತಂದೆ, ಗಂಡ, ಸ್ನೇಹಿತ, ಯಾರೇ ಆಗಿದ್ದರೂ ಅವಳಿಗೆ ಭದ್ರತೆಯ ಅಂದರೆ ಗೇಟ್ ಕೀಪರ್ ರೀತಿಯಲ್ಲಿ ಇರುತ್ತಾರೆ ಸ್ವತಂತ್ರವಾಗಿರಲು ಸಾಧ್ಯವಾಗುವುದಿಲ್ಲ ಎಂದು ನುಡಿದರು. 

ಪ್ರಸ್ತುತ ದಿನಗಳಲ್ಲಿ ಮಹಿಳೆಯ ಜೀವನ  ಹಾವು ಏಣಿಯ ಆಟದ ರೀತಿಯಲ್ಲಿ ಆಗಿದ್ದು ಮನೆಯಲ್ಲಿ ಹೆಣ್ಣು ಗಂಡು ಭೇದಭಾವವಿಲ್ಲದೆ ಮಕ್ಕಳನ್ನು ಬೆಳೆಸುವುದರ ಮೂಲಕ ಸಮಾನತೆಗೆ  ಬುನಾದಿ ಹಾಕಬೇಕು ಎಂದು ತಿಳಿಸಿದರು. 

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಪ್ರೊ. ವಿಜಯ್ ಪೂಣಚ್ಚ ತಂಬಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಒಂದು ಹೊಸ ಬಗೆಯ ಆಯಾಮಗಳಲ್ಲಿ ಚರ್ಚೆಯಾಗಬೇಕಾಗಿದ್ದು, ನಾವು ನಮ್ಮಲ್ಲಿ ಭಾವನಾತ್ಮಕವಾಗಿ ತುಂಬಾ ರೋಚಕವಾಗಿ ಮಹಿಳೆಯರನ್ನು ನೋಡದೆ ಸಮಾನ ದೃಷ್ಟಿಯಲ್ಲಿ ಕಾಣಬೇಕು ಆದರೆ ಮಾತ್ರ ಲಿಂಗ ಸಮಾನತೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಶೈಲಜ ಇಂ. ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.