ಮಂಜುನಾಥ ನಗರಕ್ಕೆ ಜಿ.ಪಂ.ಉಪ ಕಾರ್ಯದರ್ಶಿ ಭೇಟಿ

ಮತದಾನ ಮಹತ್ವ ಕುರಿತು ಜಾಗೃತಿ 

ಗದಗ 25:- ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಕಡಿಮೆ ಮತದಾನ ವಾಗಿರುವ ಬೆಟಗೇರಿ ಬಳಿಯ ಮಂಜುನಾಥ ನಗರಕ್ಕೆ ಜಿ.ಪಂ.ಉಪ ಕಾರ್ಯದರ್ಶಿ ಹಾಗೂ ಸ್ವೀಪ್ ಸಮಿತಿ ಜಿಲ್ಲಾ ನೋಡಲ್ ಅಧಿಕಾರಿ ಸಿ.ಬಿ.ದೇವರಮನಿ ಅವರು ಗುರುವಾರ ಭೇಟಿ ನೀಡಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಿದರು.  

 ಮಂಜುನಾಥ ನಗರದ ಮನೆ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆ ಸಂಬಂಧ ಮೇ 7 ರಂದು ಮತದಾನ ನಡೆಯಲಿದ್ದು, ತಪ್ಪದೇ ಮತ ಚಲಾಯಿಸುವಂತೆ ಮತದಾರರಲ್ಲಿ ಕೋರಿದರು.  

ಯಾವುದೇ ಕಾರಣಕ್ಕೂ  ಮತದಾನದಿಂದ ಅರ್ಹರು ವಂಚಿತರಾಗಬಾರದು. ಕಡ್ಡಾಯವಾಗಿ ಮತದಾನ ಮಾಡಿ, ಮತದಾನ ಹೆಚ್ಚಳಕ್ಕೆ ಸಹಕರಿಸಬೇಕು ಎಂದು ಸಿ.ಬಿ.ದೇವರಮನಿ ಅವರು ಮನವಿ ಮಾಡಿದರು.   

ಮನೆ ಮನೆಗೆ ಸ್ಟಿಕರ್ ಅಂಟಿಸುವ ಮೂಲಕ ಮೇ 7 ರಂದು ಮತ ಚಲಾಯಿಸುವಂತೆ ಹಿರಿಯ ನಾಗರಿಕರಲ್ಲಿ ಕೋರಿದರು.     

ಈ ಸಂದರ್ಭದಲ್ಲಿ ಪ್ರತಿ ಬಡಾವಣೆಗೂ ಬ್ಯಾನರ್ ಅಳವಡಿಸುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು. ಆ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳು ಹೆಚ್ಚಿನ ಅರಿವು ಮೂಡಿಸಲು ಕ್ರಮವಹಿಸಲಾಗುವುದು ಎಂದು ಜಿ.ಪಂ.ಉಪ ಕಾರ್ಯದರ್ಶಿ ಸಿ.ಬಿ.ದೇವರಮನಿ ತಿಳಿಸಿದರು.   

ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಅರಿವು ಮೂಡಿಸಲು ಮತ್ತಷ್ಟು ಶ್ರಮಿಸಲಾಗುವುದು ಎಂದು ಸ್ವಿಪ್ ಸಮಿತಿ ಜಿಲ್ಲಾ ನೋಡಲ್ ಅಧಿಕಾರಿಯವರು ಮಾಹಿತಿ ನೀಡಿದರು.   

ಇದೇ ಏಪ್ರಿಲ್ 28 ರಂದು ನಡೆಯುವ ‘ನಮ್ಮ ನಡೆ ಮತಗಟ್ಟೆ ಕಡೆಗೆ’ ಸಂಬಂಧ ಜಾಗೃತಿ ಅಭಯಾನ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನಗರದ ಬಸವೇಶ್ವರ ವೃತ್ತಕ್ಕೆ ತೆರಳಿ ವೀಕ್ಷಿಸಲಾಯಿತು. ಜಾಥಾ ಮಾರ್ಗ ವೀರನಾರಾಯಣ ದೇವಸ್ಥಾನದ ಬಳಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಮುಖ್ಯಾಪಾಧ್ಯಾಯರ ಜೊತೆಗೆ ಕಾರ್ಯಕ್ರಮ ಆಯೋಜಿಸುವ   ಬಗ್ಗೆ ಚರ್ಚಿಸಲಾಯಿತು.       

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಎಂ.ಎ.ರಡ್ಡೇರ ಅವರು ಯುವ ಮತದಾರರ ಜೊತೆ ಮಾತನಾಡಿ ಚುನಾವಣಾ ಗುರುತಿನ ಚೀಟಿ ಇದೆಯೇ? ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಕಾರಣಕ್ಕೂ ಮತದಾನ ಮಾಡಲು ಹಿಂಜರಿಕೆ ಬೇಡ. ಹತ್ತಿರದಲಿರುವ ಎಲ್ಲರಿಗೂ ಮತ ಚಲಾಯಿಸಲು ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು.