ಮುಂಬೈ 12: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು, ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಹೌದು.. ಭಾರತ ಕ್ರಿಕೆಟ್ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ., ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್ ನಲ್ಲಿ 'ಟೆಸ್ಟ್ ಕ್ರಿಕೆಟ್ನಲ್ಲಿ ನಾನು ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪ್ರಯಾಣವು ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ ಮತ್ತು ನಾನು ಜೀವನಪರ್ಯಂತ ಸಾಗಿಸುವ ಪಾಠಗಳನ್ನು ಕಲಿಸಿದೆ. ವೈಟ್ ಜೆರ್ಸಿಯಲ್ಲಿ ಆಡುವುದರಲ್ಲಿ ಆಳವಾದ ವೈಯಕ್ತಿಕ ಅಂಶವಿದೆ. ಶಾಂತವಾದ ಜಂಜಾಟ, ದೀರ್ಘ ದಿನಗಳು, ಯಾರೂ ನೋಡದ ಸಣ್ಣ ಕ್ಷಣಗಳು ಶಾಶ್ವತವಾಗಿ ಉಳಿಯುತ್ತವೆ ಎಂದಿದ್ದಾರೆ.
ಅಂತೆಯೇ ನಾನು ಈ ಸ್ವರೂಪದಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದು ಅದು ಸುಲಭವಾಗಿರಲಿಲ್ಲ. ಆದರೆ ಅದು ಸರಿ ಎಂದು ಅನಿಸುತ್ತದೆ. ನಾನು ಅದಕ್ಕೆ ನನ್ನಲ್ಲಿದ್ದ ಎಲ್ಲವನ್ನೂ ನೀಡಿದ್ದೇನೆ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಅದು ನನಗೆ ಹಿಂತಿರುಗಿಸಿದೆ.
ಈ ಆಟಕ್ಕಾಗಿ, ನಾನು ಮೈದಾನವನ್ನು ಹಂಚಿಕೊಂಡ ಜನರಿಗಾಗಿ ಮತ್ತು ದಾರಿಯುದ್ದಕ್ಕೂ ಜನರು ನನ್ನನ್ನು ಗುರುತಿಸುವಂತೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಗಾಗಿ ನಾನು ಕೃತಜ್ಞತೆಯಿಂದ ತುಂಬಿದ ಹೃದಯದಿಂದ ಹೊರಡುತ್ತಿದ್ದೇನೆ. ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ನಗುವಿನೊಂದಿಗೆ ಹಿಂತಿರುಗಿ ನೋಡಲು ಬಯಸುತ್ತೇನೆ ಎಂದು ಕೊಹ್ಲಿ ಪೋಸ್ಟ್ ಮಾಡಿದ್ದಾರೆ.
ಬುಧವಾರ (ಮೇ 7) ರಂದು ರೋಹಿತ್ ಶರ್ಮಾ ಟೆಸ್ಟ್ ಪಂದ್ಯಕ್ಕೆ ನಿವೃತ್ತಿ ಘೋಷಿಸಿದ್ದರು. ಇದಾದ ಒಂದು ವಾರದೊಳಗೆ ಕೊಹ್ಲಿ ನಿವೃತ್ತಿ ಘೋಷಣೆ ಮಾಡಿದ್ದು ಅಭಿಮಾನಿಗಳಿಗೆ ಆಘಾತ ಉಂಟಾಗಿದೆ. ಇದರೊಂದಿಗೆ ಭಾರತೀಯ ಟೆಸ್ಟ್ ಕ್ರಿಕೆಟ್ನ ಒಂದು ಅಧ್ಯಾಯ ಕೊನೆಗೊಂಡಂತಾಗಿದೆ. ಭಾರತ ತಂಡ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಅವಧಿಯಲ್ಲಿ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.