ಜಾನಪದ ಸಿರಿ : ಡಾ. ಪ್ರಕಾಶ ಖಾಡೆ

ನಮ್ಮ ಜನಪದ ಸಂಸ್ಕೃತಿ ಶ್ರೀಮಂತವಾದುದು. ನಾಡಿನ ತಳಸಮುದಾಯದ ಬದುಕು-ಬವಣೆಗಳನ್ನು ಅಧ್ಯಯನ ಮಾಡುತ್ತಲೇ, ಜನಪದ ಬೇರಿನ ಆಳಕ್ಕೆ ಇಳಿದು ಅದರ ಉಳಿವಿಗೆ ಶ್ರಮಿಸುತ್ತಿರುವ ಸಾಹಿತಿಗಳಲ್ಲಿ ಡಾ. ಪ್ರಕಾಶ ಖಾಡೆಯವರು ಪ್ರಮುಖರೆನಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಅವರು ಕಾವ್ಯ, ಕಥೆ, ಜೀವನಚರಿತ್ರೆ, ಸಂಶೋಧನೆ, ನಾಟಕ, ವಿಮರ್ಶೆ, ಜಾನಪದ ಮತ್ತು ಸಂಪಾದನೆಗಳಲ್ಲಿ ಬರೆಯುತ್ತ ಜನಮನ್ನಣೆ ಗಳಿಸಿದ್ದಾರೆ.  

ಪ್ರಕಾಶ ಖಾಡೆಯವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಗಿ ಗ್ರಾಮದಲ್ಲಿ 1965ರ ಜೂನ್ 10ರಂದು ಜನಿಸಿದರು. ತಂದೆ ಗಣಪತಿ, ತಾಯಿ ಗಂಗೂಬಾಯಿ. ಗಣಪತಿ ಖಾಡೆಯವರು ವೃತ್ತಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಲೇ ಕನ್ನಡ ಜಾನಪದ ಸಾಹಿತ್ಯದಲ್ಲಿ ಗಮನಾರ್ಹ ಹೆಸರು ಗಳಿಸಿದವರು. ಪ್ರಕಾಶ ಖಾಡೆಯವರು ಪ್ರಾಥಮಿಕ ಶಿಕ್ಷಣವನ್ನು ಕೆರೂರದಲ್ಲಿ ಮುಗಿಸಿದರು, ನಂತರ ಎಸ್‌.ಎಸ್‌.ಎಲ್‌.ಸಿ. ಯನ್ನು ಇಳಕಲ್ಲ ಸರಕಾರು ಪ್ರೌಢ ಶಾಲೆಯಿಂದ ಪಡೆದು, ಬಿ.ಎ. ಪದವಿಯನ್ನು ಸಹ ಇಳಕಲ್ಲದಲ್ಲಿಯೇ ಪೂರೈಸಿದರು. ಸ್ನಾತಕೋತ್ತರ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವೇಶವನ್ನು ಪಡೆದರು. ಅವರು ಎಂ.ಎ. ಓದುತ್ತಿರುವಾಗಲೇ ಸಾಹಿತ್ಯ ಚೇತನ ವೇದಿಕೆಯ ಸದಸ್ಯರಾಗಿ ಕ್ಯಾಂಪಸ್ಸಿನ ಕವಿತೆಗಳು ಪುಸ್ತಕವನ್ನು ಗೆಳೆಯರ ಜೊತೆಗೆ ಹೊರತಂದರು. ಕನ್ನದಡಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು.  

ಎಂ.ಎ ಮುಗಿದ ನಂತರ ಖಾಡೆಯವರು ಕನ್ನಡಮ್ಮ ದಿನಪತ್ರಿಕೆಯಲ್ಲೊ ಉಪಸಂಪಾದಕರಾಗಿ ಕೆಲಸವನ್ನು ಆರಂಭಿಸಿದರು. ನಂತರ ಅವರು ಕನ್ನಡ ಉಪನ್ಯಾಸಕರಾಗಿ ಬೈಲಹೊಂಗಲದ ಕಾಲೇಜಿನಲ್ಲಿ, ಚಂದರಗಿ ಕ್ರೀಡಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಬಾಗಲಕೋಟದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಏಳು ವರ್ಷಗಳ ಕಾಲ ಬಿ.ಆರ್‌.ಪಿ. ಯಾಗಿ ಅತ್ಯುತ್ತಮ ಸೇವೆಗೈದು ಶಿಕ್ಷಕ ಹಾಗೂ ಅಧಿಕಾರಿಗಳ ಮೆಚ್ಚುಗೆಯನ್ನು ಗಳಿಸಿದ್ದಾರೆ. ಅವರು ಬಾಗಲಕೋಟ ಸಕ್ರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಉತ್ತಮ ಮಾರ್ಗದರ್ಶಕರಾಗಿ ಹೊರಹೊಮ್ಮಿದ ಕೀರ್ತಿ ಅವದರು. 2005ರಲ್ಲಿ ಪ್ರಕಾಶ ಖಾಡೆಯವರು ಪ್ರೊ. ಎ. ವ್ಹಿ ನಾವಡ ಅವರ ಮಾರ್ಗದರ್ಶನದಲ್ಲಿ ‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ’ ಪ್ರೌಢ ಪ್ರಬಂಧವನ್ನು ಹಂಪಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಡಾಕ್ಟರೇಟ್ ಪದವಿ ಪಡೆದಿರುವರು. ಸಧ್ಯ ಬಾಗಲಕೋಟೆಯ ನವನಗರದಲ್ಲಿ ಪತ್ನಿ ಅನ್ನಪೂರ್ಣ, ಮಕ್ಕಳಾದ ಉಮಾ, ಪ್ರತಿಮಾ ಮತ್ತು ಅಭಿನವ ಹಾಗೂ ಮೊಮ್ಮಕ್ಕಳಾದ ಶ್ರೀಜಾರೊಂದಿಗೆ ನೆಲೆಸಿದ್ದಾರೆ. 

ಪ್ರಕಾಶ ಖಾಡೆಯವರು ಬಾಲ್ಯದಲ್ಲಿಯೇ ಸಾಹಿತ್ಯ ರಚನೆಯ ಅಭಿರುಚಿ ಬೆಳೆಸಿಕೊಂಡವರು. ಅವರು ಕಾರ್ಡಿನಲ್ಲಿ ಕವಿತೆಗಳನ್ನು ಬರೆದು ಆಕಾಶವಾಣಿಗೆ ಕಳುಹಿಸುತ್ತಿದ್ದರು. ಅವರಲ್ಲಿ ಸಾಹಿತ್ಯಾಭಿರುಚಿ ಬೆಳೆಯಲು ತಂದೆ ಗಣಪತಿ ಮತ್ತು ಜೋಶಿ ಗುರುಗಳ ಪ್ರೋತ್ಸಾಹವೇ ಕಾರಣವಾಯಿತು. ಪ್ರೀತಿ ಬಟ್ಟಲು, ಸಾಲು ಹನಿಗಳು, ಶಾಂತಿ ಬೀಜಗಳ ಜತನ, ಕವನ ಸಂಕಲಗಳು, ತೂಕದವರು, ಬೆಳಗುತಿದೆ ಬಸವ ಬ್ಯಾಂಕ ನಾಟಕಗಳು, ಚೆಲುವಿ ಚಂದ್ರಿ ಕಥಾ ಸಂಕಲನ, ಮುನ್ನುಡಿ ತೋರಣ, ಮೌನ ಓದಿನ ಬೆಡಗು, ಕನ್ನಡ ದೇಸಿ ಕಾವ್ಯ ಅಧ್ಯಯನ, ಬೇಂದ್ರೆ ಕಾವ್ಯ ದೇಸಿಯತೆ, ಕಾವ್ಯ ನಾದದ ಧ್ಯಾನ ವಿಮರ್ಶೆ. ಕೃಷ್ಣಾತೀರದ ಜಾನಪದ ಒಗಟುಗಳು, ನೆಲಮೂಲ ಸಂಸ್ಕೃತಿ, ಜಾನಪದ ಹೆಬ್ಬಾಗಿಲು, ಬಾಗಲಕೋಟೆ ಜಿಲ್ಲೆಯ ಜನಪದ ಹಾಡುಗಳು ಜಾನಪದ ಕೃತಿಗಳು, ಜನಪದ ಕೋಗಿಲೆ ಗೌರಮ್ಮ ಚಲವಾದಿ ಜೀವನ ಚರಿತ್ರೆ, ಕೃಷಿ ಋಷಿ, ಬಸವ ಸಿರಿ, ಜತ್ತಿ ಕಾವ್ಯಾಭಿವಂದನ, ನೂರೆಂಟು ಕವಿಗಳ ಕೊರೊನಾ ಕಾಲದ ಕವಿತೆಗಳಯ, ಜಿ.ಬಿ ಖಾಟೆಯವರ ನಕ್ಕು ನಗಿಸುವ  ಹಾಸ್ಯ ಪ್ರಸಂಗಗಳು ಹೀಗೆ ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. 

‘ಚೆಲುವಿ ಚೆಂದ್ರಿ’  ಕಥಾ ಸಂಕಲನದ ಎಲ್ಲ ಕಥೆಗಳು ಹಳ್ಳಿಯ ಪರಿಸರದಿಂದ ಕೂಡಿವೆ. ಅಲ್ಲಿನ ಮೌಲಿಕ ಸುಂದರ ಬದುಕು, ಆಧುನಿಕತೆಯಿಂದ ಆಗಾಗ ತಲ್ಲಣಗೊಳ್ಳುವ ಆತಂಕ, ಅಲ್ಲೊಂದು ಇಲ್ಲೊಂದು ಜೀವ ಕೊಲ್ಲುವ ಘಟನೆಗಳ ಜೊತೆಗೆ ಸೂಕ್ಷ್ಮವಾಗಿ ಹಳ್ಳಿ ಪರಿಸರದ ವಿವರಗಳನ್ನು ಕೊಡುತ್ತಾರೆ. ಇಂದಿನ ಪ್ರಕ್ಷುಬ್ಧ ಪರಿಸ್ಥಿಯಲ್ಲಿ ಯಾರೂ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಈ ಅಶಾಂತಿಯ ಪರ್ವದಲ್ಲಿ ಕಾವ್ಯ ಮಾತ್ರ ಶಾಂತಿಯನ್ನು ಅರಳಿಸಬಲ್ಲದು ಎಂದು ‘ಶಾಂತಿ ಬೀಜಗಳ ಜತನ’ ಕವನಸಂಕಲನದ ಕವನಗಳು ವ್ಯಕ್ತಪಡಿಸುತ್ತವೆ. ಕನ್ನಡ ಜಾನಪದ ಸೊಗಡು-ಸ್ವಾರಸ್ಯಗಳನ್ನು ಬೇಂದ್ರೆಯವರು ವಿಫುಲವಾಗಿ ಬಳಸಿಕೊಂಡರು. ದೇಸಿಯಂತೆ ಬೇಂದ್ರೆ ಕಾವ್ಯದ ಒಂದು ಮುಖ್ಯ ಗುಣವಾಗಿದೆ ಎಂಬುದನ್ನು ಅವರ ವಿಮರ್ಶೆ ಕೃತಿ ‘ಬೇಂದ್ರೆ ಕಾವ್ಯದ ದೇಸಿಯಂತೆ’ಯಲ್ಲಿ ಅರ್ಥಪೂರ್ಣವಾಗಿ ಚರ್ಚಿಸಿದ್ದಾರೆ. ‘ಕಾವ್ಯ ನಾದದ ಧ್ಯಾನ’ ಕೃತಿಯಲ್ಲಿನ ವಿಮರ್ಶೆ ಬರಹಗಳೆಲ್ಲ ಕನ್ನಡ ಕಾವ್ಯ ಚರಿತೆಯ ಮರು ಅಧ್ಯಯನಕ್ಕೆ ತೋರು ಬೆರಳಾಗಿವೆ. ‘ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ’ ಎಂಬ ಸುಂದರ ಸಂಕಲನದಲ್ಲಿ ಅಂತರ್ಜಾಲದ ಬ್ಲಾಗ, ಫೇಸ್ಬುಕ್ ಮೊದಲಾದ ಮಾಧ್ಯಮಗಳಲ್ಲಿ ನಿತ್ಯವೂ ಬರೆಯುತ್ತಿರುವ ಮೂರು ನೂರಕ್ಕೂ ಹೆಚ್ಚು ನಾಲ್ಕು ಸಾಲಿನ ಹನಿಗಳನ್ನು ಸಂಗ್ರಹಿಸಿ ಹೊರತಂದಿದ್ದಾರೆ. ಅವರ ಬರಹಗಳನ್ನು ಬ್ಲಾಗನಲ್ಲಿಯೂ ಕೂಡ ಓದಿಕೊಳ್ಳಬಹುದು. ನಮ್ಮ ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಜಾನಪದ ಕಲೆ, ಜಾನಪದ ಹಾಡುಗಳ ಕುರಿತಾಗಿ ಮಾಡಿದ ಸಂಶೋಧನಾ ಲೇಖನಗಳು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿವೆ.  

ಡಾ. ಪ್ರಕಾಶ ಖಾಡೆಯವರು ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. 1992ರಿಂದ 1995ರ ಅವಧಿಯಲ್ಲಿ ರಾಮದುರ್ಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, 1996ರಿಂದ ಲೋಕಾಪುರದಲ್ಲಿ ಜಾನಪದ ಉಳಿಸಿ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ, 2003ರಲ್ಲಿ ಸೃಷ್ಟಿ ಸೃಜನ ವೇದಿಕೆ ಹುಟ್ಟು ಹಾಕುವುದರ ಮೂಲಕ  ಉದಯೋನ್ಮುಖ ಕವಿಗಳಿಗೆ ಮಾರ್ಗದರ್ಶನ ಮತ್ತು ಸಾಹಿತ್ಯ ಸಂಗಾತಿ ಪತ್ರಿಕೆ ಪ್ರಾರಂಭ, 2008ರಿಂದ 2012ರವರೆಗೆ ಬಾಗಲಕೋಟೆ ಜಿಲ್ಲಾ ಕನನ್ಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಹಾಗೂ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಫೇಸ್‌ಬುಕ್ ಲೈವ್ ಸರಣಿ ಉಪನ್ಯಾಸ ಮಾಲಿಕೆ ‘ಬೆಳಕಾಯಿತು ಬಾಗಲಕೋಟೆ’ ಕಾರ್ಯಕ್ರಮದಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯ ಸಾಧಕರ ಕುರಿತು ನೂರಾರು ಉಪನ್ಯಾಸಗಳನ್ನು ಏರಿ​‍್ಡಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಇಡೀ ಕರ್ನಾಟಕ ಅಷ್ಟೇ ಅಲ್ಲ, ವಿಶ್ವದೆಲ್ಲೆಡೆಯಲ್ಲಿರುವ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು. ಆಕಾಶವಾಣಿ ಧಾರವಾಡ, ಕಲುಬುರ್ಗಿ ಕೇಂದ್ರಗಳಿಂದ ಅವರ ಚಿಂತನ, ಜಾನಪದ ಸಂಗೀತ ರೂಪಕ, ಭಾಷಣ ಮತ್ತು ಸ್ವರಚಿತ ಕವಿತೆಗಳ ವಾಚನ ಪ್ರಸಾರಗೊಂಡಿವೆ. ಅಲ್ಲದೇ ದೂರದರ್ಶನ ಚಂದನ ವಾಹಿನಿಯ ಬೆಳಗು ಕಾರ್ಯಕ್ರಮದಲ್ಲಿ ಖಾಡೆಯವರ ನೇರ ಸಂದರ್ಶನ ಪ್ರಸಾರವಾಗಿದೆ.  

ಡಾ. ಖಾಡೆಯವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸೇವೆಗೆ ನಾಡಿನ ಮೂಲೆ ಮೂಲೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಶ್ರೇಷ್ಠ ಸಾಹಿತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಕಡಣಿ ಸಾಹಿತ್ಯ ಪ್ರಶಸ್ತಿ, ಜಾನಪದ ಸಿರಿ, ಸುವರ್ಣ ಕನ್ನಡಿಗ, ಬೇಂದ್ರೆ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಜಾನಪದ ಕಲಾ ಲೋಕ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಹರಿಹರ ಶ್ರೀ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಡಾ. ಪ್ರಕಾಶ ಖಾಡೆಯವರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದು, ಸಾಹಿತಿ ಗೆಳೆಯರ ಬಳಗವನ್ನು ಹೊಂದಿದ್ದಾರೆ. ನಾಡು-ನುಡಿ ಕಟ್ಟುವಲ್ಲಿ ಜನಪದ ಸಂಸ್ಕೃತಿ-ಆಚರಣೆಗಳ ಮೌಲ್ಯ ತಿಳಿಸಿ ಕೊಡುವಲ್ಲಿ ಅವರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಅವರಿಂದ ಇನ್ನೂ ಹೆಚ್ಚು ಕೃತಿಗಳು ಮೂಡಿಬರಲಿ, ಅವರ ಸಾಹಿತ್ಯ ಸೇವೆ ನಿರಂತರವಾಗಿರಲಿ ಎಂದು ಆಶಿಸುವೆ.  

- * * * -