ತಾಯಿ-ಮಗುವಿನ ಆರೋಗ್ಯಕ್ಕೆ ಮೊದಲ 1000 ದಿನಗಳು ನಿರ್ಣಾಯಕ: ನ್ಯಾಯಾಧೀಶ ಬಿರಾದಾರ

ತಾಯಿ-ಮಗುವಿನ ಆರೋಗ್ಯಕ್ಕೆ ಮೊದಲ 1000 ದಿನಗಳು ನಿರ್ಣಾಯಕ: ನ್ಯಾಯಾಧೀಶ ಬಿರಾದಾರ  First 1,000 days crucial for mother and child health: Judge Biradar

ಲೋಕದರ್ಶನ ವರದಿ  

ಹಾವೇರಿ, ಆ. 9: ಗರ್ಭಧಾರಣೆಯಿಂದ ಮಗುವಿನ ಎರಡನೇ ಹುಟ್ಟುಹಬ್ಬದವರೆಗಿನ ಮೊದಲ 1,000 ದಿನಗಳು ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಅತ್ಯಂತ ನಿರ್ಣಾಯಕವಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವೇಂದ್ರ​‍್ಪ ಎನ್‌. ಹೇಳಿದರು.  

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಭವನದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲ ರಕ್ಷಾ ಭಾರತ ಎನ್ಜಿಒ ಹಾಗೂ ಶಾಹಿ ಟ್ಯಾಕ್ಸಿ ಪೋರ್ಟ್‌ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ‘ಸುವರ್ಣ 1000 ದಿನಗಳು’ ಕುರಿತ ಪುನರ್ಮನನ ತರಬೇತಿ ಹಾಗೂ ಎರಡು ದಿನಗಳ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಗರ್ಭಧಾರಣೆಯಿಂದ ಮಗುವಿನ ಎರಡನೇ ಹುಟ್ಟುಹಬ್ಬದವರೆಗಿನ ಅವಧಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಅವಧಿಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಆರೋಗ್ಯದ ಬಗ್ಗೆ ಅರಿವು ಹಾಗೂ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಈ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹೇಳಿದರು.  

ಸಮಾಜದಲ್ಲಿ ಬಾಲ್ಯವಿವಾಹ ನಿಷೇಧ, ವರದಕ್ಷಿಣೆ ನಿಷೇಧ ಸೇರಿದಂತೆ ವಿವಿಧ ಕಾನೂನುಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದೆ. ಮಾನವ ಕಳ್ಳಸಾಗಣೆ ತಡೆ, ಮಾದಕ ವಸ್ತುಗಳ ಅಕ್ರಮ ಸಾಗಣೆ, ಮಕ್ಕಳ ಹಕ್ಕುಗಳು, ಜಲ ಸಂರಕ್ಷಣೆ ಹಾಗೂ ಎಸ್‌ಐಆರ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಕಾನೂನು ಅರಿವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಸಲಹೆ ನೀಡಿದರು.  

ಮೊದಲ 1,000 ದಿನಗಳ ಅವಧಿಯಲ್ಲಿ ತಾಯಿ ಮತ್ತು ಮಕ್ಕಳ ಮರಣ ಹಾಗೂ ಅನಾರೋಗ್ಯದ ಅಪಾಯ ಹೆಚ್ಚಿರುವುದರಿಂದ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪೌಷ್ಟಿಕಾಂಶಯುಕ್ತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವಂತೆ ಹಾಗೂ ಈ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವಂತೆ ಅವರು ಕರೆ ನೀಡಿದರು.