ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ, ತಾಕತ್ತಿದ್ದರೆ POK ವಾಪಸ್ ಪಡೆಯಲಿ: ಫಾರೂಕ್ ಅಬ್ದುಲ್ಲಾ

ಶ್ರೀನಗರ 06: ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ವಾಪಸ್ ಪಡೆಯಲಿದೆ ಎಂಬ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, 'ತಾಕತ್ತಿದ್ದರೆ POK ವಾಪಸ್ ಪಡೆಯಲಿ, ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ.. ಅವರ ಬಳಿಯೂ ಅಣು ಬಾಂಬ್ ಇದೆ' ಎಂದು ಕಿಡಿಕಾರಿದ್ದಾರೆ.

ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, ಪಿಒಕೆಯನ್ನು ಭಾರತ ಬಲಪೂರ್ವಕವಾಗಿ ವಶಪಡಿಸಿಕೊಳ್ಳುವ ಅಗತ್ಯ ಇಲ್ಲ. ಅಲ್ಲಿನ ಜನರೇ ಭಾರತದ ಜೊತೆ ವಿಲೀನ ಮಾಡುತ್ತಾರೆ. ಪಾಕ್ ಆಕ್ರಮಿತ ಕಾಶ್ಮೀರದ ಭಾಗದ ಮೇಲಿನ ಹಕ್ಕನ್ನು ಭಾರತ ಎಂದಿಗೂ ಬಿಡುವುದಿಲ್ಲ. ಆದರೆ, ಆ ಭಾಗವನ್ನು ಭಾರತ ಬಲವಂತವಾಗಿ ವಶಪಡಿಸಿಕೊಳ್ಳುವ ಅವಶ್ಯಕತೆ ಇಲ್ಲ.

ಯಾಕೆಂದರೆ ಭಾರತದ ಭಾಗದಲ್ಲಿರುವ ಜಮ್ಮು ಕಾಶ್ಮೀರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಂಡು ಜನರೇ ಪಿಒಕೆಯನ್ನು ಪಾಕಿಸ್ತಾನದಿಂದ ಮುಕ್ತಗೊಳೀಸುತ್ತಾರೆ ಎಂದು ಹೇಳಿದ್ದರು. ಅಂತೆಯೇ ‘ಪಿಒಕೆ ಅಂದಿಗೂ, ಇಂದಿಗೂ, ಎಂದಿಗೂ ಭಾರತದ ಭಾಗವಾಗಿಯೇ ಇದೆ. ಪಿಒಕೆ ಪಡೆಯಲು ನಾವು ಬಲಪ್ರಯೋಗ ಮಾಡುವುದಿಲ್ಲ. ಪಿಒಕೆ ಭಾರತದ ಜೊತೆ ವಿಲೀನ ಆಗಬೇಕೆಂದು ಜನರೇ ಹೇಳುತ್ತಿದ್ದಾರೆ. ಅಂತಹ ಬೇಡಿಕೆಗಳು ಈಗ ಬರತೊಡಗಿವೆ,’ ಎಂದು ಹೇಳಿದ್ದರು.

ಫಾರೂಕ್ ಅಬ್ದುಲ್ಲಾ ಆಕ್ರೋಶ

ಪಾಕ್ ಆಕ್ರಮಿತ ಕಾಶ್ಮೀರ ಭಾಗ ಭಾರತದ ಪಾಲಾಗುತ್ತದೆ ಎಂದು ರಾಜನಾಥ್ ಸಿಂಗ್ ನೀಡಿದ ಹೇಳಿಕೆಗೆ ಫಾರೂಕ್ ಅಬ್ದುಲ್ಲಾ ಟಾಂಗ್ ನೀಡಿದ್ದು, 'ಪಿಒಕೆಯನ್ನು ಭಾರತ ಆಕ್ರಮಿಸುವಾಗ ಪಾಕಿಸ್ತಾನ ಕೈಗೆ ಬಳೆ ತೊಟ್ಟಿರುವುದಿಲ್ಲ. ಅವರ ಬಳಿ ಅಣು ಬಾಂಬ್​ಗಳಿವೆ. ರಾಜನಾಥ್ ಸಿಂಗ್​ಗೆ ತಾಕತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಅಂತೆಯೇ ‘ರಕ್ಷಣಾ ಸಚಿವರು ಹೀಗೆ ಹೇಳುತ್ತಿದ್ದಾರೆಂದರೆ, ಮಾಡಿ ತೋರಿಸಲಿ. ನಾವ್ಯಾಕೆ ಅವರನ್ನು ತಡೆಯೋಣ. ಆದರೆ, ಪಾಕಿಸ್ತಾನೀಯರು ಕೈಗೆ ಬಳೆ ತೊಟ್ಟಿಕೊಂಡು ಇರುವುದಿಲ್ಲ. ಆ ದೇಶದಲ್ಲಿ ಅಟಂ ಬಾಂಬ್​ಗಳಿವೆ ಎಂಬುದು ಗೊತ್ತಿರಲಿ. ದುರದೃಷ್ಟ ಎಂದರೆ ಆ ಅಣು ಬಾಂಬ್ ಗಳು ನಮ್ಮ ಮೇಲೆಯೇ ಬೀಳುತ್ತದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.