ದೇವರಹಿಪ್ಪರಗಿ 06: ತಾಲೂಕಿನ ಕೆರೂಟಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ತೊಗರಿ ಬೇಳೆಗೆ ರೈತರು ಸಂಬಂಧಿಸಿದ ಕಂಪನಿಗೆ ಬೆಳೆ ವಿಮಾ ಕಂತು ಪಾವತಿಸಿದ್ದರೂ ಕಂಪೆನಿಯವರು ಇಲ್ಲಿಯವರೆಗೂ ರೈತರಿಗೆ ಬೆಳೆ ವಿಮೆಯಾಗಲಿ ಮಧ್ಯಂತರ ಪರಿಹಾರವಾಗಲಿ ಪಾವತಿಸಿಲ್ಲ ಎಂದು ಆರೋಪಿಸಿ ಮಂಗಳವಾರದಂದು ಗ್ರಾಮದ ರೈತರು ಪಟ್ಟಣದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರು.
ಹಲವಾರು ಜನ ರೈತ ಮುಖಂಡರು ಮಾತನಾಡಿ ರೈತರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು, ಮಧ್ಯವರ್ತಿಗಳು ಬೆಳೆ ವಿಮೆ ಪರಿಹಾರಕ್ಕೆ ಕನ್ನ ಹಾಕುತ್ತಿದ್ದಾರೆ. ಪಾರದರ್ಶಕ ವ್ಯವಸ್ಥೆ ಇದ್ದರೂ ರೈತರಿಗೆ ಮೋಸ ಮಾಡುವ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕುರಿತು ತನಕ್ಕೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಬೆಳೆಹಾನಿಗೆ ತಕ್ಷಣ ಮಧ್ಯಂತರ ಪರಿಹಾರ ನೀಡಬೇಕು. ರೈತರು ಪರಿಹಾರಕ್ಕೆ ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ್ದರು ಪರಿಹಾರ ಜಮಾ ಆಗಿಲ್ಲ. ಕೆಲ ರೈತರಿಗೆ ಪರಿಹಾರ ಹಣ ಜಮಾ ಆಗಿದೆ ಎಂದು ರೈತರು ಆರೋಪಿಸಿ ಪ್ರತಿಭಟನೆ ನಡೆಸಿ ವಿಮಾ ಕಂಪೆನಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಇಲ್ಲಿಗೆ ಕರೆಯಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.
ಆಗ ಕೃಷಿ ಇಲಾಖೆ ಅಧಿಕಾರಿಗಳಾದ ಎಚ್.ವೈ.ಸಿಂಗೆಗೋಳ, ಶರಣಗೌಡ ಹಾಗೂ ಹೆಚ್. ಎಸ್. ಪಾಟೀಲ, ವಿಮಾ ಕಂಪನಿ ಅಧಿಕಾರಿಗಳು ಹಾಗೂ ತಾ.ಪಂ ಇಒ ಭಾರತಿ ಚೆಲುವಯ್ಯ ಮಧ್ಯ ಪ್ರವೇಶಿಸಿ, ರೈತರನ್ನು ಸಮಾಧಾನ ಪಡಿಸಿ ಮೇ.15ನೇ ತಾರಿಖಿನ ಒಳಗಾಗಿ ವರದಿ ತರಿಸಿಕೊಂಡು ಪರೀಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ರೈತ ಮುಖಂಡರಿಗೆ ಭರವಸೆ ನೀಡಿದ ಕಾರಣ ಪ್ರತಿಭಟನೆ ಹಿಂಪಡೆದರು.
ರೈತರಿಗೆ ನ್ಯಾಯ ಒದಗಿಸದಿದ್ದರೆ 15ನೇ ತಾರೀಕಿಗೆ ಪುನಃ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ರೈತ ಮುಖಂಡರುಗಳಾದ ಸಿದ್ದು ಬುಳ್ಳಾ, ರಮೇಶ ಮಸಿಬಿನಾಳ, ಪ್ರಕಾಶ ಪಡಶೆಟ್ಟಿ, ಸೋಮು ದೇವೂರ, ಮಲ್ಲು ಚಟ್ಟರಕಿ, ಸಿದ್ದನಗೌಡ ಪೋಲಾಸಿ, ಶಂಕರಗೌಡ ಪಾಟೀಲ, ಮಲಕಾಜಯ್ಯ ಹಿರೇಮಠ, ಅಂಬಾಬಾಯಿ ರಜಪೂತ, ಸೊಂಬಾಯಿ ಕರೆತಪ್ಪಗೋಳ, ಕಲ್ಯಾಣಯ್ಯ ಹಿರೇಮಠ, ಮಾದೇವಪ್ಪ ಬರಗಲ, ಸಿದ್ದಣ್ಣ ಪೂಜಾರಿ ಸೇರಿದಂತೆ ಗ್ರಾಮದ ರೈತರು ಪಾಲ್ಗೊಂಡಿದ್ದರು.