ರೈತರ ಜಮೀನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ರೈತರ ಜಮೀನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್  Farmers' land will not be forcibly acquired: CM D.K. Shivakumar

ಲೋಕದರ್ಶನ ವರದಿ 

ಬಳ್ಳಾರಿ ಜು.15: ಬಿಡದಿ ಟೌನ್ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.  ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ನೀಡಲು ಇಚ್ಛಿಸದ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು. ಸರ್ಕಾರ ಯಾರ ಮೇಲೂ ಒತ್ತಡ ಹೇರುವುದಿಲ್ಲ ಎಂದು ಭರವಸೆ ನೀಡಿದರು.  

ಯೋಜನೆ ಜಾರಿಯ ಸಾಧಕ-ಬಾಧಕಗಳನ್ನು ಪರೀಶೀಲಿಸಲು ಹಾಗೂ ರೈತರ ಅಭಿಪ್ರಾಯ ಮತ್ತು ಆತಂಕಗಳನ್ನು ಆಲಿಸಲು ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು. ಸಮಿತಿಯ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.  ಬಿಡದಿಯಲ್ಲಿ ನಡೆದ ಜಮೀನು ಸರ್ವೇ ವೇಳೆ ನಡೆದ ಹಿಂಸಾಚಾರಕ್ಕೆ ಬೇಸರ ವ್ಯಕ್ತಪಡಿಸಿದ ಸಿಎಂ, ಕೆಲವು ವ್ಯಕ್ತಿಗಳು ರಾಜಕೀಯ ಪ್ರೇರಣೆಯಿಂದ ರೈತರನ್ನು ತಪ್ಪು ದಾರಿಗೆಳೆದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.  

ಈ ಯೋಜನೆ ತಮ್ಮ ಕನಸಿನ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದ ಡಿ.ಕೆ. ಶಿವಕುಮಾರ್, ಹಿಂದಿನ ಸರ್ಕಾರಗಳು ಆರಂಭಿಸಿದ್ದ ಯೋಜನೆಯನ್ನು ಮುಂದುವರಿಸುತ್ತಿದ್ದೇವೆ ಅಷ್ಟೇ ಎಂದರು. "ನಾನು ಕೂಡ ರೈತನ ಮಗ. ರೈತರ ಹಿತಕ್ಕೆ ಧಕ್ಕೆ ತರುವ ಯಾವುದೇ ಕೆಲಸ ಮಾಡುವುದಿಲ್ಲ" ಎಂದು ಹೇಳಿದರು.  ಯೋಜನಾ ಪ್ರದೇಶವನ್ನು ’ರೆಡ್ ಝೇನ್‌’ ಎಂದು ಘೋಷಿಸಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಬಿಡಿಎ ಅನುಮತಿ ಇಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶವಿಲ್ಲ ಎಂದು ಅವರು ತಿಳಿಸಿದರು.  

ಹಿಂದಿನ ಸರ್ಕಾರದ ಅವಧಿಯಲ್ಲಿ ಖಾಸಗಿ ಡೆವಲಪರ್ ಡಿಎಲ್‌ಎಫ್ ಕಂಪನಿಗೆ ಯೋಜನೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿತ್ತು. ಬಳಿಕ 2010ರಲ್ಲಿ ಇದೇ ಯೋಜನೆಗೆ ಜಾಗತಿಕ ಟೆಂಡರ್ ಆಹ್ವಾನಿಸಲಾಗಿತ್ತು ಎಂದು ಅವರು ವಿವರಿಸಿದರು.  ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲ, ಶಾಸಕ ಬಾಲಕೃಷ್ಣ ಹಾಗೂ ಇತರರು ಉಪಸ್ಥಿತರಿದ್ದರು.