ಕಾವೇರಿ ನೀರು ಹರಿಸುವುದನ್ನು ತಡೆಯಲು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

ಕಾವೇರಿ ನೀರು ಹರಿಸುವುದನ್ನು ತಡೆಯಲು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ  Farmers' association protests, demanding a halt to the release of Cauvery water

ಲೋಕದರ್ಶನ ವರದಿ  

ಯರಗಟ್ಟಿ, ಆಗಸ್ಟ್‌ 14: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ತಡೆಯಬೇಕು ಹಾಗೂ ಮಹದಾಯಿ ಮತ್ತು ಕಳಸಾ-ಬಂಡೂರಿ ಕಾಮಗಾರಿಗಳನ್ನು ಶೀಘ್ರ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.  ನಂತರ ಯರಗಟ್ಟಿ ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅವರ ಮೂಲಕ ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದರು.  

ರೈತ ಸಂಘದ ಮುಖಂಡ ವೆಂಕಣ್ಣ ಹುರುಕನ್ನವರ ಮಾತನಾಡಿ, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಡಬ್ಲ್ಯುಸಿಆರ್ಸಿ ವರದಿಯನ್ನು ಮರುಪರೀಶೀಲಿಸಬೇಕು. ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು.  

“ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯದ ರೈತರ ಹಿತ ಕಾಪಾಡಲು ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಬೇಡಿಕೆಗಳನ್ನು ನಿರ್ಲಕ್ಷಿಸಿ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು,” ಎಂದು ಅವರು ಎಚ್ಚರಿಸಿದರು.  

ಪ್ರತಿಭಟನೆಯಲ್ಲಿ ಸಿಪಿಐ ಮುಖಂಡ ಐ.ಎಂ. ಮಠಪತಿ, ರೈತ ಸಂಘದ ತಾಲೂಕು ಅಧ್ಯಕ್ಷ ರಂಗಪ್ಪ ಗಂಗರಡ್ಡಿ, ರಾಮಣ್ಣ ಎಳ್ಳಿಮ್ಮಿ ಗಿರೇಪ್ಪ ಗಂಗರಡ್ಡಿ, ಯಕ್ಕರ​‍್ಪ ತಳವಾರ, ಅಕ್ಕಮ್ಮ ಗಂಗರಡ್ಡಿ, ಶಮೀಜಾ ಪತ್ತು ನಾಯ್ಕ, ಶೇಖರ ಕಿಲಾರಿ, ಗೌಡಪ್ಪ ಕಳಸಪ್ಪನವರ, ಯಮಪ್ಪ ಮಾಳಗಿ, ಸುರೇಶ ಗಣಗಿ ಹಾಗೂ ಯಕ್ಕೇರ​‍್ಪ ಮಾಳಗಿ ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.