ಜನಪದ ಕಲೆಗಳ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು : ಡಾ. ರಾಜೇಂದ್ರ ಗಡಾದ

 ಜನಪದ ಕಲೆಗಳ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು : ಡಾ. ರಾಜೇಂದ್ರ ಗಡಾದ  Everyone must join hands to preserve folk arts: Dr. Rajendra Gadad

ಲೋಕದರ್ಶನ ವರದಿ    

 ಗದಗ, ಆಗಸ್ಟ್‌ 12: ಕಾಲಗತಿಯನ್ನು ಮೀರಿ ಸತ್ವವನ್ನು ಮೈಗೂಡಿಸಿಕೊಂಡ ದೊಡ್ಡಾಟ, ಸಣ್ಣಾಟ, ತೊಗಲುಗೊಂಬೆಯಾಟ ಸೇರಿದಂತೆ ಅನೇಕ ಜನಪದ ಕಲೆಗಳನ್ನು ನಮ್ಮ ಜನಪದೀಯರು ಆತ್ಮೀಯತೆ, ನಂಬಿಕೆ ಹಾಗೂ ಭಾವನಾತ್ಮಕತೆಯಿಂದ ತಲೆಮಾರಿನಿಂದ ತಲೆಮಾರಿಗೆ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇದು ನಮ್ಮ ಜನಪದ ಸಂಸ್ಕೃತಿಯ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ಹಾಗೂ ಸಂಶೋಧಕ ಡಾ. ರಾಜೇಂದ್ರ ಎಸ್‌. ಗಡಾದ ಹೇಳಿದರು.  

ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದಲ್ಲಿ ಬೆಟಗೇರಿಯ ಬಿ.ಬಿ. ಬಣ್ಣದ ಜನಪದ ಕಲಾ ಮೇಳ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಹಾಗೂ ಶ್ರೀಅಡವೀಂದ್ರಸ್ವಾಮಿ ಮಠದ ಶಿವಾನುಭವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ‘ಶ್ರೀದೇವಿ ಮಹಾತ್ಮೆ’ ದೊಡ್ಡಾಟ ಪ್ರದರ್ಶನ ಸಮಾರಂಭಕ್ಕೆ ಮದ್ದಳೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.  

ಜಾಗತೀಕರಣ, ನಗರೀಕರಣ ಹಾಗೂ ಕೈಗಾರೀಕೀಕರಣದ ಪರಿಣಾಮ ದೊಡ್ಡಾಟ ಸೇರಿದಂತೆ ಅನೇಕ ಜನಪದ ಕಲೆಗಳು ಅಳಿವಿನಂಚಿಗೆ ತಲುಪುತ್ತಿವೆ. ಇವುಗಳ ಪ್ರಭಾವದಿಂದ ಕೆಲವು ಮೂಲ ಕಲೆಗಳು ಬದಲಾವಣೆಗೆ ಒಳಗಾಗುತ್ತಿವೆ. ಇನ್ನೂ ಕೆಲವು ಕಲಾ ತಂಡಗಳು ಜೀವ ಹಿಡಿದುಕೊಂಡು ಬದುಕುತ್ತಿವೆ. ಕಲಾವಿದರು ಹಾಗೂ ಕಲಾ ತಂಡಗಳು ವಿರಳವಾಗುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಪ್ರೋತ್ಸಾಹಿಸಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಜನಪದೀಯರ ಜವಾಬ್ದಾರಿಯಾಗಿದೆ ಎಂದು ಹೇಳಿದರು.