ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ಪರಿಸರವಾದಿ ಡಾ. ಮಹಾಂತೇಶ ತಪಶೆಟ್ಟಿ
Environmental protection is our responsibility: Environmentalist Dr. Mahantesh Tapashetti
ಲೋಕದರ್ಶನ ವರದಿ
ಧಾರವಾಡ 11 : ಪರಿಸರ ಸಂರಕ್ಷಣೆ ಎನ್ನುವುದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹುಬ್ಬಳ್ಳಿಯ ಖ್ಯಾತ ಕಿವಿ, ಮೂಗು, ಗಂಟಲು ತಜ್ಞರು ಹಾಗೂ ಪರಿಸರವಾದಿ ಡಾ. ಮಹಾಂತೇಶ ತಪಶೆಟ್ಟಿ ಅಭಿಪ್ರಾಯಪಟ್ಟರು. ಇಲ್ಲಿನ ’ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ)’ ಧಾರವಾಡ ಸ್ಥಳೀಯ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಸಸಿ ನೆಡುವ ಮೂಲಕ ಅವರು ಮಾತನಾಡುತ್ತಿದ್ದರು. ಮುಖ್ಯವಾಗಿ ಗಾಳಿ, ನೀರು ಮತ್ತು ಭೂಮಿಯ ಮಾಲಿನ್ಯವನ್ನು ತಡೆಗಟ್ಟುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಮುಂದುವರಿದು ಮಾತನಾಡಿದ ಡಾ. ತಪಶೆಟ್ಟಿ ಅವರು, ಪರಿಸರ ಕಾಳಜಿಗೆ ಪೂರಕವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡಿ, ನಿತ್ಯದ ಜೀವನದಲ್ಲಿ ಸೈಕಲ್ ಚಾಲನೆ ಹಾಗೂ ನಡಿಗೆಯನ್ನು ರೂಢಿಸಿಕೊಂಡರೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುವುದರ ಜೊತೆಗೆ ಸಾರ್ವಜನಿಕರ ಆರೋಗ್ಯವೂ ಸುಧಾರಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಂಧನ ಉಳಿತಾಯದ ಕರೆಯನ್ನು ಅವರು ನೆನಪಿಸಿದರು.
ಪ್ರತಿಯೊಬ್ಬ ನಾಗರಿಕರು ಮನೆ ಕಟ್ಟುವಾಗ ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡರೆ ಮುಂದಿನ ದಿನಗಳಲ್ಲಿ ನೀರಿನ ಅಭಾವವನ್ನು ತಗ್ಗಿಸಬಹುದು ಎಂದು ಸಲಹೆ ನೀಡಿದರು. ಮಿತಿಮೀರಿದ ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ಪ್ಲಾಸ್ಟಿಕ್ ಸೇರಿದಂತೆ ಮಣ್ಣಿನಲ್ಲಿ ಕರಗದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಮಣ್ಣಿನ ತೇವಾಂಶ ಮತ್ತು ಗಾಳಿಯಾಡುವಿಕೆ ಸಂಪೂರ್ಣವಾಗಿ ಹಾಳಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ. ಬಸವರಾಜ ಅನಾಮಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಪರಿಸರ ನಾಶವಾದರೆ ನಮ್ಮ ಭವಿಷ್ಯವೇ ನಾಶವಾಗುತ್ತದೆ ಎಂದು ಎಚ್ಚರಿಸಿದರು. ಪ್ರಕೃತಿಯನ್ನು ಉಳಿಸಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗಲಿದ್ದು, ಮಾನವ ಕುಲದ ಉಳಿವಿಗಾಗಿ ಪರಿಸರ ಸಂರಕ್ಷಣೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಅಭಿಲಾಷ್ ದೇಸಾಯಿ ಅವರು ಸರ್ವರನ್ನೂ ಸ್ವಾಗತಿಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಡಾ. ಡಿ. ಕೆ. ಕುಲಕರ್ಣಿ ಅವರು ಮುಖ್ಯ ಅತಿಥಿಗಳಾದ ಡಾ. ಮಹಾಂತೇಶ ತಪಶೆಟ್ಟಿ ಅವರನ್ನು ಸಭೆಗೆ ಪರಿಚಯಿಸಿದರು. ಡಾ ಪ್ರಕಾಶ ಮುನ್ನೋಳಿ ವಿಶ್ವ ಪರಿಸರದ ದಿನಾಚರಣೆಯ ಬಗ್ಗೆ ಹೇಳಿದರು. ಸಂಸ್ಥೆಯ ಗೌರವಾನ್ವಿತ ಕಾರ್ಯದರ್ಶಿಗಳಾದ ಡಾ. ಕೆ. ಎನ್. ಪಾಟೀಲ್ ಅವರು ಕೊನೆಯಲ್ಲಿ ವಂದನಾರೆ್ಣ ಮಾಡಿದರು.
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು 