ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿಕೊಳ್ಳಲು ಶಿಕ್ಷಕಿಯರ ನೇಮಕಕ್ಕೆ ಒತ್ತಾಯ

ಕಂಪ್ಲಿ 09: ತಾಲೂಕಿನ ಜವುಕು ಸಹಿಪ್ರಾ ಶಾಲಾವರಣದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ ಶುಕ್ರವಾರ ಜರುಗಿತು. ಗ್ರಾಮಸಭೆಯಲ್ಲಿ ಮಕ್ಕಳು ಮೂಲಸೌಕರ್ಯಗಳ ಜೊತೆ ತಾವು ಅನುಭವಿಸುತ್ತಿರುವ ವಿಶೇಷ ಸಮಸ್ಯೆಗಳನ್ನು ತೆರೆದಿಟ್ಟು ಗ್ರಾಮಾಡಳಿತದ ಗಮನ ಸೆಳೆದರು.  

ಜವುಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ಮಾತ್ರ ಇರುವುದರಿಂದ ವಿದ್ಯಾರ್ಥಿನಿಯರು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಿಕ್ಷಕಿಯರಿಲ್ಲದಿದ್ದರಿಂದ ತೊಂದರೆಯಾಗುತ್ತಿದ್ದು ಶಿಕ್ಷಕಿಯರನ್ನು ನೇಮಿಸುವಂತೆ, ಋತುಮತಿ ಸಮಯದಲ್ಲಾಗುವ ಮುಜುಗುರ ತಪ್ಪಿಸಲು ವಿದ್ಯಾರ್ಥಿನಿಯರಿಗೆ ಶುಚಿಪ್ಯಾಡ್ ವಿತರಿಸುವಂತೆ 8ನೇತಗರತಿ ವಿದ್ಯಾರ್ಥಿನಿಯರಾದ ಸಂಜನಾ, ಜಯಶ್ರೀ, ಅಮೃತಾ ಅಲವೊತ್ತಿಕೊಂಡರು.  

ಶಾಲೆಯಲ್ಲಿ ಹಸಿರು ವಾತಾವರಣಕ್ಕಾಗಿ ಶಾಲೆಗೆ ತಲಾ100ಸಸಿಗಳನ್ನು ವಿತರಿಸುವಂತೆ ಜವುಕು, ಗೋನಾಳ್ ಶಾಲೆ ಮಕ್ಕಳಾದ ಮಂಜುನಾಥ್, ಹರೀಷ್ ಒತ್ತಾಯಿಸಿದರು. ಅಂಜನಾಪುರ ಸಕಿಪ್ರಾ ಶಾಲೆಯಲ್ಲಿ ಏಕೋಪಾಧ್ಯಾಯರಿದ್ದು ಇನ್ನೊಬ್ಬ ಶಿಕ್ಷಕರನ್ನು ನೇಮಿಸುವಂತೆ 4ನೇತರಗತಿ ವಿದ್ಯಾರ್ಥಿನಿ ಭವಾನಿ ಒತ್ತಾಯಿಸಿದಳು. ದೂರು ಚೀಟಿಗಳಿರುವ ಮಕ್ಕಳ ಧ್ವನಿಪೆಟ್ಟಿಗೆಯನ್ನು ಗ್ರಾಪಂ.ಅಧ್ಯಕ್ಷರಿಗೆ ನೀಡಿದರು. 

ಗ್ರಾಪಂ.ಅಧ್ಯಕ್ಷೆ ಕವಿತಾ ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಎಚ್‌.ಸಿ.ರಾಘವೇಂದ್ರ, ಪಿಡಿಒ ಬೀರಲಿಂಗ, ಗ್ರಾಪಂ ಸದಸ್ಯರಾದ ರತ್ನಮ್ಮ, ಅಂಜನಾಪುರ ವೀರಣ್ಣ, ಸಿ.ಬಸವರಾಜ, ಕರವಸೂಲಿಗಾರ ಡಿ.ಎಂ.ಜಡೆಯ್ಯಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿನಾಥ, ಗ್ರಾಮದ ಮುಖಂಡರು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆರಿದ್ದರು.