ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
ರಾಯಬಾಗ 23: ತಾಲೂಕಿನ ನಸಲಾಪೂರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ತೋಟಪಟ್ಟಿ ರಸ್ತೆಗಳನ್ನು ಡಾಂಬರೀಕರಣ ಮಾಡಿ, ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಯುವ ಧುರೀಣ ಧೂಳಗೌಡ ಪಾಟೀಲ ಹೇಳಿದರು.
ಶನಿವಾರ ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಕನ್ನಡ ಶಾಲೆಯಿಂದ ಸದಾಶಿವ ಬನಾಜ ಮನೆವರೆಗೆ ಜಿ.ಪಂ. ಸದಸ್ಯೆ ವಿಲಾಸಮತಿ ಪಾಟೀಲ ಇವರ ಅನುದಾನದಲ್ಲಿ ಮಂಜೂರಾದ 5 ಲಕ್ಷರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆ ಮಾಡುವುದರಿಂದ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುತ್ತದೆ. ಜೊತೆಗೆ ತೋಟಪಟ್ಟಿ ಜನರಿಗೆ ತಾಲೂಕು ಕೇಂದ್ರಗಳಿಗೆ ಹೋಗಲು ಅನುಕೂಲವಾಗುತ್ತದೆ ಎಂದರು.
ನ್ಯಾಯವಾದಿ ಮುರಗೇಶ ಕೋಟಿವಾಲೆ, ಮಹಾದೇವ ಕೋಟಿವಾಲೆ, ಮಾರುತಿ ಸನದಿ, ರಾಮಚಂದ್ರ ಬನಾಜ, ಶಂಕರ ಕೋಷ್ಠಿ, ಮಾರುತಿ ವಂಜಿರೆ, ದಿನೇಶ ಕೋಟಿವಾಲೆ, ರಮೇಶ ಬೆಳಗಲಿ ಸೇರಿದಂತೆ ಇತರರು ಇದ್ದರು.