ಯಡಿಯೂರಪ್ಪಗೆ ತೊಂದರೆ ಕೊಡಬೇಡಿ; ಕಾಂಗ್ರೆಸ್ ಆರ್.ಬಿ.ತಿಮ್ಮಾಪುರ

ಧಾರವಾಡ, ಫೆ  8 :   ಬಿಜೆಪಿಗೆ ಅಗತ್ಯವಿರುವುದಾದರೆ ಕಾಂಗ್ರೆಸ್‌ನಿಂದ ಇನ್ನು ಹತ್ತು ಜನ ಶಾಸಕರನ್ನು ಖರೀದಿಸಲ. ಆದರೆ  ಮುಖ್ಯಮಂತ್ರಿ ಬಿ.ಎಸ್.      ಯಡಿಯೂರಪ್ಪ ಅವರಿಗೆ ಮಾತ್ರ ಬಿಜೆಪಿ ವರಿಷ್ಠರು ತೊಂದರೆಕೊಡಬಾರದು ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.

ಸುದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪ ಬೇಡವಾದರೆ ಕಿತ್ತು ಹಾಕಲಿ, ಆದರೆ ಅವರನ್ನು  ಆಟವಾಡಿಸುವುದು ಬೇಡ. ಯಡಿಯೂರಪ್ಪ ಬೇಡವಾದರೆ ಈಗಲೇ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಹಾಕಲಿ, ನಮ್ಮ ಕಾಂಗ್ರೆಸ್‌ನ ಇನ್ನು ಹತ್ತು ಜನ ಶಾಸಕರನ್ನು ಬೇಕಾದರೆ ತೆಗೆದುಕೊಳ್ಳಲಿ, ನಮ್ಮವರ ರಾಜೀನಾಮೆ ಕೊಡಿಸುವುದಾದರೆ ಕೊಡಿಸಲಿ. ದೇಶದ ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದರು. 

ಯಡಿಯೂರಪ್ಪ ಅವರಿಗೆ ಅವಮರ್ಯಾದೆ ಮಾಡುತ್ತಿದ್ದು, ಇದು ರಾಜ್ಯದ ಜನತೆಗೆ ಅವಮಾನ ಮಾಡಿದಂತೆ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿ ಅನಿತ್  ಶಾ, ನರೇಂದ್ರ ಮೋದಿ ಮುಂದೆ  ತಗ್ಗಿ ಬಗ್ಗಿ ನಡೆಯುವುದು ಸರಿಯಲ್ಲ ಎಂದರು.

ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಕಿಂಗ್ ಆಗುವುದಕ್ಕೆ ಸಾಧ್ಯವಿಲ್ಲ, ಹೀಗಾಗಿ ಅವರು ಕಿಂಗ್ ಮೇಕರೇ ಆಗಬೇಕು. ಕೆಪಿಸಿಸಿಗೆ ಶಿವಕುಮಾರ್ ಅಧ್ಯಕ್ಷರಾಗುತ್ತಾರೆಯೋ ಇಲ್ಲವೊ ಗೊತ್ತಿಲ್ಲ. ಎಐಸಿಸಿ ಈ ವಿಷಯದಲ್ಲಿ ಗುಟ್ಟು ಬಿಟ್ಟು ಕೊಡುತ್ತಿಲ್ಲ ಎಂದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂಎಲ್‌ಸಿ ಚುನಾವಣೆ ಸ್ಪರ್ಧಿಸಿರುವ ಕುರಿತು ಮಾತನಾಡಿದ ಅವರು, ಬಿಜೆಪಿಯ ಕೆಲ ಶಾಸಕರೇ ಅಭ್ಯರ್ಥಿ ಹಾಕಿ ಎಂದಿದ್ದಾರೆ‌, ಅದಕ್ಕಾಗಿಯೇ ಎಂಎಲ್‌ಸಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದಾರೆ,  ಪವರ್ ಗೇಮ್‌ನಲ್ಲಿ ಸವದಿ ಸೋಲಬಹುದು ಎಂದರು. 

ಸರ್ಕಾರ ನಮ್ಮ ಭಾವನೆ ವಿರುದ್ಧ ನಡೆಯುತ್ತಿದೆ ಎಂದು ಬಿಜೆಪಿಯ ಒಳಗಡೆ  ಕೆಲವರಿಗೆ ಅನಿಸಿದೆ. ಹೀಗಾಗಿಯೇ ಕೆಲವು ಶಾಸಕರು ಅಭ್ಯರ್ಥಿ ಹಾಕುವಂತೆ ಹೇಳಿರಬೇಕು, ಆ ಪಕ್ಷದಲ್ಲಿ ಬೇಗುದಿ ಇದೆ, ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಅತೃಪ್ತರ ಜೊತೆ ಮಾತನಾಡಿಯೇ ಸ್ಪರ್ಧಿಸಿರಬೇಕು ಎಂದು ಮೇಲ್ಮನೆ  ಚುನಾವಣೆಯ ರಹಸ್ಯ ಬಿಚ್ಚಿಟ್ಟರು.