ಮಲಗಲದಿನ್ನಿ ಕೆರೆಗೆ ಕಾಲುವೆ ನೀರು ಹರಿಸಿ; ಇಲ್ಲವಾದರೆ ಹೆದ್ದಾರಿ ಬಂದ್‌: ರೈತರ ಎಚ್ಚರಿಕೆ

ಮಲಗಲದಿನ್ನಿ ಕೆರೆಗೆ ಕಾಲುವೆ ನೀರು ಹರಿಸಿ; ಇಲ್ಲವಾದರೆ ಹೆದ್ದಾರಿ ಬಂದ್‌: ರೈತರ ಎಚ್ಚರಿಕೆ  Divert canal water to the lake without delay; otherwise, the highway will be blocked: Farmers' warni


ಮುದ್ದೇಬಿಹಾಳ 01: ಆಲಮಟ್ಟಿ ಕೆಬಿಜೆಎನ್‌ಎಲ್ ಕಾಲುವೆಗಳ ಮೂಲಕ ಕರೆಕಟ್ಟೆಗಳಿಗೆ ನೀರು ತುಂಬಿಸಬಹುದೆಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಲಗಲದಿನ್ನಿ ಕೆರೆಗೆ ಸಮರ​‍್ಕವಾಗಿ ನೀರು ಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿ ಚವನಭಾವಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.  

ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಚವನಭಾವಿ ಗ್ರಾಮದ ರೈತರು ಹಾಗೂ ಮುಖಂಡರು, ಶಿರಸ್ತೇದಾರ ಎಂ.ಎ. ಬಾಗೇವಾಡಿ ಅವರ ಮೂಲಕ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೂಡಲೇ ಮಲಗಲದಿನ್ನಿ ಕೆರೆಗೆ ಕಾಲುವೆ ನೀರು ಹರಿಸಿ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.  

ಕೆರೆ ತುಂಬಿದರೆ ಅಂತರ್ಜಲ ಹೆಚ್ಚಳ: ಮಲಗಲದಿನ್ನಿ ಕೆರೆಗೆ ಕಾಲುವೆ ನೀರು ಹರಿಸಿ ತುಂಬಿಸುವುದರಿಂದ ಪಕ್ಕದಲ್ಲಿರುವ ಚವನಭಾವಿ ಹಳ್ಳದ ಬ್ಯಾರೇಜ್ ಕೂಡ ಭರ್ತಿಯಾಗಲಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ, ಜನರು ಹಾಗೂ ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಪ್ರಮಾಣದಲ್ಲಿ ನಿವಾರಣೆಯಾಗಲಿದೆ ಎಂದು ರೈತ ಮುಖಂಡ ಯಮನಪ್ಪ ನಾಯ್ಕೋಡಿ ಹೇಳಿದರು.  

ಪ್ರಸ್ತುತ ಮಳೆ ಕೊರತೆಯಿಂದಾಗಿ ಬೆಳೆಗಳು ಸಂಪೂರ್ಣವಾಗಿ ಕೈಕೊಟ್ಟಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಗೆ ನೀರು ದೊರೆಯದಿದ್ದರೂ ಕನಿಷ್ಠ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.  

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ: ಕಾಲುವೆಗೆ ನೀರು ಹರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮರ​‍್ಕವಾಗಿ ಪರೀಶೀಲನೆ ನಡೆಸದ ಕಾರಣ ಮಲಗಲದಿನ್ನಿ ಕೆರೆ ಇದುವರೆಗೂ ಭರ್ತಿಯಾಗಿಲ್ಲ. ಕಾಲುವೆ ನೀರು ಅಕ್ರಮವಾಗಿ ಬಳಕೆಯಾಗುವುದನ್ನು ಹಾಗೂ ಮಾರ್ಗಮಧ್ಯೆ ಅನಗತ್ಯವಾಗಿ ಪೋಲಾಗುವುದನ್ನು ತಕ್ಷಣವೇ ತಡೆಗಟ್ಟಬೇಕು ಎಂದು ರೈತರು ಆಗ್ರಹಿಸಿದರು.  

ಕಾಲುವೆ ವ್ಯವಸ್ಥೆಯ ಸಮರ​‍್ಕ ನಿರ್ವಹಣೆ ಮಾಡದಿರುವುದರಿಂದ ಕೆರೆಗೆ ಅಗತ್ಯ ಪ್ರಮಾಣದ ನೀರು ತಲುಪುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ, ಕಾಲುವೆಯಿಂದ ಮಲಗಲದಿನ್ನಿ ಕೆರೆಗೆ ಸಮರ​‍್ಕವಾಗಿ ನೀರು ಹರಿಯುವಂತೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ಒಂದು ವಾರ ಗಡುವು:  ಮುಂದಿನ ಒಂದು ವಾರದೊಳಗೆ ಮಲಗಲದಿನ್ನಿ ಕೆರೆಗೆ ನೀರು ತುಂಬಿಸಿ, ಚವನಭಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ನಾಲತವಾಡ ಮುದ್ದೇಬಿಹಾಳ ಸಂಪರ್ಕಿಸುವ ಮಲಗಲದಿನ್ನಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.