ಶಿಂದೊಳ್ಳಿ ಸರ್ಕಾರಿ ಶಾಲೆಯಲ್ಲಿ ಇಶಾನಾ ಫೌಂಡೇಶನ್ ವತಿಯಿಂದ ಶಾಲಾ ಬ್ಯಾಗ್ ವಿತರಣೆ

ಶಿಂದೊಳ್ಳಿ ಸರ್ಕಾರಿ ಶಾಲೆಯಲ್ಲಿ ಇಶಾನಾ ಫೌಂಡೇಶನ್ ವತಿಯಿಂದ ಶಾಲಾ ಬ್ಯಾಗ್ ವಿತರಣೆ  Distribution of school bags at Shindolli Government School by the Ishana Foundation

ಶಿಂದೊಳ್ಳಿ 05: ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯುವ ಮುಖಂಡ ಚೇತನ ಮೋಹನ ಅಂಗಡಿ ಅವರ ಅಧ್ಯಕ್ಷತೆಯ ಇಶಾನಾ ಫೌಂಡೇಶನ್ ವತಿಯಿಂದ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. 

ಇದೇ ಸಂದರ್ಭದಲ್ಲಿ ಸಮಾಜ ಸೇವಕ ವೀರಭದ್ರಯ್ಯ ಬಾಬು ಪೂಜಾರ ಅವರು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಗಂಗಾ ನದಿ’ ವಿಷಯದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  

 ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಮುಖಂಡ ಚೇತನ ಅಂಗಡಿ ಮಕ್ಕಳ ಮುಖದಲ್ಲಿ ಯಾವಾಗಲೂ ನಗು ಇರಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಹಾಗೂ ಭಾರತದ ಭವಿಷ್ಯ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದು, ಉತ್ತಮವಾಗಿ ಅಭ್ಯಾಸ ಮಾಡಿ ತಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.  

 ಸಮಾಜ ಸೇವಕ ವೀರಭದ್ರಯ್ಯ ಪೂಜಾರ ಮಾತನಾಡಿ, ಗಂಗಾ ನದಿಯ ಉಗಮದಿಂದ ಸಮುದ್ರ ಸೇರುವವರೆಗೆ ದೇಶದ ಜನರಿಗೆ ಅದರ ವಿವಿಧ ರೀತಿಯ ಉಪಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು ಎಂದು ತಿಳಿಸಿದರು.  

 ಗಂಗಾ ನದಿಯಲ್ಲಿ ಹಾಗೂ ನದಿ ದಡದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು, ನದಿಯಿಂದ ದೊರೆಯುವ ಫಲವತ್ತಾದ ಮಣ್ಣು, ವಿದ್ಯುತ್ ಉತ್ಪಾದನೆ, ಅಣೆಕಟ್ಟುಗಳು, ಕೃಷಿಗೆ ನೀರು, ಕುಡಿಯುವ ನೀರು ಸೇರಿದಂತೆ ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಗಂಗಾ ನದಿಯ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೊಸ ಸಂಶೋಧನೆಗಳನ್ನು ಕೈಗೊಂಡು ತಮ್ಮ ಊರಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಅವರು ಆಶಿಸಿದರು.  

 ಕಾರ್ಯಕ್ರಮದಲ್ಲಿ ರವೀಂದ್ರ ಬೆಲ್ಲದ, ವೃಷಭ ತಿಗಡಿ, ಮಾಳಿಗರಾಯ ಶಾಹಾಪೂರಕರ, ನಿಂಗಣ್ಣ ಮೇಕಲಮರ್ಡಿ, ಗಂಗಾರಾಮ ಕರೆಗಾರ, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.