ಮಕ್ಕಳ ಸಮಗ್ರ ಆರೋಗ್ಯಕ್ಕೆ ಜಂತುಹುಳು ನಿವಾರಕ ಮಾತ್ರೆ ಅಗತ್ಯ
Deworming tablets are essential for the overall health of children
ಲೋಕದರ್ಶನ ವರದಿ
ಬಳ್ಳಾರಿ, ಆ.10 (ಕರ್ನಾಟಕ ವಾರ್ತೆ): ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಮರ್ಕವಾಗಿ ಆಗಲು ಮತ್ತು ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ಜಂತುಹುಳು ನಿವಾರಕ (ಅಲ್ಬೆಂಡಜೋಲ್) ಮಾತ್ರೆಗಳನ್ನು ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಡಿ. ಮಳಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್ಸಿಹೆಚ್ ವಿಭಾಗ, ಗಾಂಧಿನಗರ ನಗರ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕಪ್ಪಗಲ್ಲು ರಸ್ತೆಯ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ’ದಡಿ ಸಮುದಾಯ ಆಧಾರಿತ ಜಂತುಹುಳು ನಿವಾರಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಹದಲ್ಲಿನ ರಕ್ತದ ಪ್ರಮಾಣ ಕಡಿಮೆಯಾಗುವುದರಿಂದ ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆಗಳು ದೀರ್ಘಕಾಲದವರೆಗೆ ಕಾಡುವ ಸಾಧ್ಯತೆ ಇದೆ. ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಮುಂದುವರಿದರೆ ಹದಿಹರೆಯದಲ್ಲಿ ಹಲವು ಗಂಭೀರ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ರಕ್ತಹೀನತೆಯನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡುವುದರಿಂದ ಮಕ್ಕಳ ದೈಹಿಕ ಬೆಳವಣಿಗೆಯಲ್ಲಿನ ಕುಂಠಿತತೆಯನ್ನು ತಡೆದು, ಅವರ ಬಾಲ್ಯವನ್ನು ಸದೃಢಗೊಳಿಸಲು ಸಾಧ್ಯ ಎಂದು ಹೇಳಿದರು.
1ರಿಂದ 2 ವರ್ಷದೊಳಗಿನ ಮಕ್ಕಳಿಗೆ 200 ಮಿಲಿಗ್ರಾಂ ಹಾಗೂ 2ರಿಂದ 19 ವರ್ಷದೊಳಗಿನ ಮಕ್ಕಳಿಗೆ 400 ಮಿಲಿಗ್ರಾಂ ಅಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗುತ್ತಿದೆ. ‘ಜಂತುಮುಕ್ತ ಮಕ್ಕಳು ದೇಶದ ಸಂಪತ್ತು’ ಎಂಬ ಆಶಯದೊಂದಿಗೆ ಎಲ್ಲ ವಿದ್ಯಾರ್ಥಿಗಳು ಈ ಮಾತ್ರೆಯ ಸದುಪಯೋಗ ಪಡೆದುಕೊಂಡು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಮಾತನಾಡಿ, ಜಿಲ್ಲೆಯ ಎಲ್ಲ ಗ್ರಾಮ, ನಗರ ಹಾಗೂ ಪಟ್ಟಣಗಳ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರೆ ವಿತರಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳಲ್ಲಿ ಮಾತ್ರೆ ನೀಡಲಾಗುತ್ತಿದ್ದು, ಮಾತ್ರೆ ಪಡೆಯಲು ಬಿಟ್ಟುಹೋದ ಮಕ್ಕಳಿಗೆ ಆಗಸ್ಟ್ 17ರಂದು ಮಾತ್ರೆ ನೀಡಲಾಗುವುದು. ಮಕ್ಕಳು ಯಾವುದೇ ಕಾರಣಕ್ಕೂ ಮಾತ್ರೆಯನ್ನು ನುಂಗದೆ, ಚೀಪುವ ಮೂಲಕ ಸೇವಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಂತುಹುಳು ನಿವಾರಣೆಯಿಂದ ರಕ್ತಹೀನತೆ ನಿಯಂತ್ರಣ, ಪೌಷ್ಟಿಕತೆ ಹಾಗೂ ರೋಗನಿರೋಧಕ ಶಕ್ತಿ ಸುಧಾರಣೆ, ಓದಿನಲ್ಲಿ ಏಕಾಗ್ರತೆ, ಹಾಜರಾತಿಯಲ್ಲಿ ಪ್ರಗತಿ ಮತ್ತು ದೈಹಿಕ-ಮಾನಸಿಕ ಆರೋಗ್ಯ ರಕ್ಷಣೆ ಸಾಧ್ಯವಾಗುತ್ತದೆ. ಕಾಯಿಲೆಯ ಯಾವುದೇ ಲಕ್ಷಣಗಳು ಕಾಣಿಸದಿದ್ದರೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ಸುರಕ್ಷಿತ ಮಾತ್ರೆಯನ್ನು ಸೇವಿಸುವುದು ಅಗತ್ಯ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರ ಕುಮಾರ್, ವೈದ್ಯಾಧಿಕಾರಿಗಳಾದ ಡಾ. ಸಾತ್ವಿಕ್ ಹಾಗೂ ಡಾ. ಚಂದನ, ಬಳ್ಳಾರಿ ಡಯಟ್ ಹಿರಿಯ ಉಪನ್ಯಾಸಕ ಮಯೂರ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಿ.ಎಚ್. ಚಿಟ್ಟಿ, ಶಾಲೆಯ ಮುಖ್ಯಗುರು ಅಕ್ಕಮಹಾದೇವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಎಸ್. ಕರ್ಜಗಿ ಹಾಗೂ ರೇಣುಕಾ ಜಡಗಣ್ಣನವರ್, ಡಿಎನ್‌ಒ ಗೀರೀಶ್, ಆರ್ಕೆಎಸ್ಕೆ ಸಲಹೆಗಾರ ಮನೋಹರ್ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 