ಕಾಲುವೆ ಕೊನೆಭಾಗಕ್ಕೆ ನೀರು ಹರಿಸಲು ಆಗ್ರಹ
ವಿಜಯಪುರ, 12: ಮುಳವಾಡ ಏತ ನೀರಾವರಿ ವ್ಯಾಪ್ತಿಯ ಮಲಘಾಣ ಪಶ್ಚಿಮ ಕಾಲುವೆಯ ಕೊನೆ ಅಂಚಿನವರೆಗೆ ನೀರು ಹರಿಸಿ, ಜನ-ಜಾನುವಾರು ಹಾಗೂ ಕೃಷಿಗೆ ಶಾಶ್ವತವಾಗಿ ನೀರು ಒದಗಿಸುವಂತೆ ಆಗ್ರಹಿಸಿ ಬಸವನಬಾಗೇವಾಡಿ ತಾಲ್ಲೂಕಿನ ಅರ್ಜುಣಗಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಎರಡನೇ ದಿನದ ಧರಣಿಯಲ್ಲಿ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರು ಕೃಷಿ ಮತ್ತು ಜಾನುವಾರುಗಳಿಗೆ ನೀರು ಕೇಳುತ್ತಿದ್ದಾರೆ. ಆದರೆ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮಲಘಾಣ ಪಶ್ಚಿಮ ಕಾಲುವೆ ನಿರ್ಮಾಣಗೊಂಡು 13 ವರ್ಷ ಕಳೆದರೂ ಕೊನೆಯ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗಿಲ್ಲ. ಕಾಲುವೆಯ ಕೊನೆ ಅಂಚಿನವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳದಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಹಾಗೂ ಸಚಿವರನ್ನು ಅವರು ತೀವ್ರವಾಗಿ ಪ್ರಶ್ನಿಸಿದರು.
ರೈತರಿಗೆ ನಿರಂತರ 15ರಿಂದ 20 ದಿನಗಳ ಕಾಲ ನೀರು ಹರಿಸಬೇಕು. ಪ್ರತಿ ವರ್ಷ ಹೋರಾಟ ನಡೆಸಿಯೇ ನೀರು ಪಡೆಯುವ ಪರಿಸ್ಥಿತಿ ಬರಬಾರದು. ಕಾಲುವೆಯ ಕೊನೆ ಭಾಗಕ್ಕೆ ನೀರು ತಲುಪಿಸುವಲ್ಲಿ ಇರುವ ಅಡೆತಡೆಗಳನ್ನು ಸಂಬಂಧಿಸಿದ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ನಿವಾರಿಸಬೇಕು ಎಂದು ಒತ್ತಾಯಿಸಿದರು.
ರೈತರ ಬೇಡಿಕೆ ಈಡೇರಿಸುವವರೆಗೆ ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ಅರವಿಂದ ಕುಲಕರ್ಣಿ ಎಚ್ಚರಿಸಿದರು.
ಧರಣಿಯಲ್ಲಿ ರಮೇಶ ದೇಸಾಯಿ, ಹೂವಪ್ಪ ಹುಕ್ಕೇರಿ, ಪ್ರಭು ಬಸವಾಡ, ಸುರೇಶ ನಾವಲಗಿ, ಪ್ರೇಮಾನಂದ ದೇಸಾಯಿ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘದ ಬಸವನಬಾಗೇವಾಡಿ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮೀ ಬಿರಾದಾರ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.