ಬರಗಾಲ ಘೋಷಣೆಗೆ ಒತ್ತಾಯ: ಸರ್ಕಾರಕ್ಕೆ ಕರ್ನಾಟಕ ಸಂಘಟನೆಗಳ ಮನವಿ

ಬರಗಾಲ ಘೋಷಣೆಗೆ ಒತ್ತಾಯ: ಸರ್ಕಾರಕ್ಕೆ ಕರ್ನಾಟಕ ಸಂಘಟನೆಗಳ ಮನವಿ Demand to declare drought: Karnataka organizations appeal to the government

 

ರಾಣೇಬೆನ್ನೂರು 02:  ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಮರ​‍್ಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಕೂಡಲೇ ಬರಗಾಲ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಹೆಮ್ಮೆಯ ಕರ್ನಾಟಕ ಸಂಘಟನೆಯ ಮುಖಂಡರು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಈರಣ್ಣ ಕೊಂಡಜ್ಜಿ, ರಾಜ್ಯ ಸರ್ಕಾರ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸದೆ ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಇದರಿಂದ ಜಿಲ್ಲೆಯ ಹಾಗೂ ತಾಲೂಕಿನ ರೈತ ವರ್ಗವು ಹಲವು ರೀತಿಯ ನಷ್ಟ ಮತ್ತು ಸಂಕಷ್ಟಗಳನ್ನು ಅನುಭವಿಸುವಂತಾಗಿದೆ ಎಂದರು.  

ಭಾರತೀಯ ಹವಾಮಾನ ಇಲಾಖೆ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ವಾಡಿಕೆಗಿಂತ ಸುಮಾರು 32 ಶೇಕಡಾ ಮಳೆಯ ಕೊರತೆ ಉಂಟಾಗಿದೆ. ಸತತವಾಗಿ ಮಳೆ ಬಾರದಿರುವುದರಿಂದ ತೇವಾಂಶದ ಕೊರತೆ ಎದುರಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.  

ಮಳೆಯ ನೀರೀಕ್ಷೆಯಲ್ಲಿದ್ದ ರೈತರು ಈಗಾಗಲೇ ಒಂದಕ್ಕಿಂತ ಹೆಚ್ಚು ಬಾರಿ ಬಿತ್ತನೆ ಮಾಡಿದ್ದು, ನೀರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ಬೆಳೆ ಹಾನಿ ಹಾಗೂ ರೈತರ ಪರಿಸ್ಥಿತಿಯನ್ನು ಪರೀಶೀಲಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.  

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.  

ಮುಂಚೂಣಿಯಲ್ಲಿ ರೈತ ಮುಖಂಡರಾದ ಪ್ರವೀಣ ಸರ್ವಂದ, ವಿಜಯಕುಮಾರ ಎಂ., ನಾರಾಯಣ ಲಕ್ಷ್ಮೀಶ್ವರ, ಹನುಮಂತ ಕರಿಯಜ್ಜಿ, ನಾಗರಾಜ್ ಮಣೇಗಾರ, ಬೀರೇಶ ರಾಹುತಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.