ಅಂತ್ಯಸಂಸ್ಕಾರದ ನೆಪದಲ್ಲಿ ಬಡ ಕುಟುಂಬಗಳಿಗೆ ಮದ್ಯ ಕುಡಿಸುವ ಪದ್ಧತಿ ನಿಷೇಧಕ್ಕೆ ಆಗ್ರಹ

ಅಂತ್ಯಸಂಸ್ಕಾರದ ನೆಪದಲ್ಲಿ ಬಡ ಕುಟುಂಬಗಳಿಗೆ ಮದ್ಯ ಕುಡಿಸುವ ಪದ್ಧತಿ ನಿಷೇಧಕ್ಕೆ ಆಗ್ರಹ  Demand to ban the practice of serving alcohol to poor families under the guise of funeral rites

ಅಮಾನವೀಯ ಪದ್ಧತಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ತರಬೇಕು: ಕೃಷ್ಣ ಎಚ್‌. ಹಡಪದ  

ಗದಗ, ಸೆ. 11: ಹಿಂದೂಳಿದ ಹಾಗೂ ಬಡ ಸಮುದಾಯಗಳಲ್ಲಿ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ, ಅಂತ್ಯಸಂಸ್ಕಾರದ ಸಾಮಗ್ರಿಗಳನ್ನು ಖರೀದಿಸುವ ನೆಪದಲ್ಲಿ ‘ಮಾರುಕಟ್ಟೆ ಸಂತೆ’ ಹೆಸರಿನಲ್ಲಿ ಬಡ ಕುಟುಂಬಗಳಿಂದ ಕೆಲವರು ಬಲವಂತವಾಗಿ ಸಾರಾಯಿ ಕುಡಿಸುವ ಅಮಾನವೀಯ ಹಾಗೂ ಕ್ರೂರ ಪದ್ಧತಿಯನ್ನು ರಾಜ್ಯಾದ್ಯಂತ ತಕ್ಷಣವೇ ನಿಷೇಧಿಸಿ, ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಗದಗದ ಸಾಮಾಜಿಕ ಕಾರ್ಯಕರ್ತ ಕೃಷ್ಣ ಎಚ್‌. ಹಡಪದ ಆಗ್ರಹಿಸಿದ್ದಾರೆ.  

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಅನಿಷ್ಟ ಪದ್ಧತಿಯಿಂದ ಬಡ ಕುಟುಂಬಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.  

“ಮರಣ ಹೊಂದಿದವರ ಮನೆಯಲ್ಲಿ ದುಃಖದ ಮೌನ, ಕಣ್ಣೀರು ಹಾಗೂ ಕುಟುಂಬದ ಭವಿಷ್ಯದ ಬಗ್ಗೆ ಆತಂಕದ ವಾತಾವರಣ ಇರುತ್ತದೆ. ಇಂತಹ ಸೂತಕದ ಮನೆಯಲ್ಲಿ ಸಾಂತ್ವನ ಹೇಳಿ ಧೈರ್ಯ ತುಂಬಬೇಕಾದ ಸಂದರ್ಭದಲ್ಲಿ ಕೆಲವರು ‘ಸಂತೆ ಮಾಡಲು ಬರಬೇಕು, ಬಂದವರಿಗೆ ಸಾರಾಯಿ ಕೊಡಬೇಕು’ ಎಂದು ಒತ್ತಾಯಿಸುವುದು ನಾಗರಿಕ ಸಮಾಜಕ್ಕೆ ಹಿಡಿದ ಕೈಗನ್ನಡಿ” ಎಂದು ಕೃಷ್ಣ ಎಚ್‌. ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಡವರ ಕಣ್ಣೀರಿನ ಮೇಲೆ ಮದ್ಯದ ಅಮಲು ಬಯಸುವ ಈ ಕೆಟ್ಟ ಮನಸ್ಥಿತಿಯನ್ನು ಸಮಾಜದಿಂದ ಬೇರುಸಹಿತ ಕಿತ್ತೊಗೆಯುವ ಕಾಲ ಬಂದಿದೆ ಎಂದು ಅವರು ಹೇಳಿದ್ದಾರೆ.