ಅಧಿಕಾರಿಗಳ ವರ್ಗಾವಣೆ, ಆರೋಗ್ಯ ಮತ್ತು ಸಾರಿಗೆ ಸೌಲಭ್ಯಕ್ಕೆ ಆಗ್ರಹ

ಅಧಿಕಾರಿಗಳ ವರ್ಗಾವಣೆ, ಆರೋಗ್ಯ ಮತ್ತು ಸಾರಿಗೆ ಸೌಲಭ್ಯಕ್ಕೆ ಆಗ್ರಹ  Demand for transfer of officials and for health and transport facilities

ಲೋಕದರ್ಶನ ವರದಿ  

ಗದಗ, ಆ. 08: ಕಳೆದ 10 ವರ್ಷಗಳಿಂದ ಗದಗ ಜಿಲ್ಲೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿ, ಆಡಳಿತಾತ್ಮಕವಾಗಿ ಗಮನ ಹರಿಸುವಂತೆ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹಿಸಿದ್ದಾರೆ.  

ಈ ಕುರಿತು ಗದಗಕ್ಕೆ ಆಗಮಿಸಿದ್ದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರಿಗೆ ಮನವಿ ಸಲ್ಲಿಸಿದ ಅವರು, ದೀರ್ಘಕಾಲದಿಂದ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಯಾಗದೆ ಇರುವುದರಿಂದ ಆಡಳಿತ ಯಂತ್ರಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.  

ವರ್ಗಾವಣೆಗೊಂಡ ಅಧಿಕಾರಿಗಳು ಮತ್ತೆ ಅದೇ ಜಿಲ್ಲೆಗೆ ಬಾರದಂತೆ ವಿಶೇಷ ನಿಯಮ ರೂಪಿಸಿ, ಸೂಕ್ತ ಮಾರ್ಗಸೂಚಿ ಜಾರಿಗೊಳಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.  ಹಳೆಯ ಜಿಲ್ಲಾಸ್ಪತ್ರೆ ನವೀಕರಣಕ್ಕೆ ಒತ್ತಾಯ  

ನಗರದ ಹೃದಯಭಾಗದಲ್ಲಿರುವ ಹಳೆಯ ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ನವೀಕರಿಸಿ, ಕನಿಷ್ಠ 50 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಬೇಕು. ಇಲ್ಲಿ ಪೂರ್ಣ ಪ್ರಮಾಣದ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸಿದರೆ ನಗರದ ಹಿರಿಯ ನಾಗರಿಕರು ಹಾಗೂ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.  

ಅದೇ ರೀತಿ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಪೂರ್ಣ ಪ್ರಮಾಣದ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಬೇಕು. ಇದರಿಂದ ಗದಗ ನಗರ ಹಾಗೂ ಸುತ್ತಮುತ್ತಲಿನ 25ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದು ವಿಶ್ವನಾಥ ಖಾನಾಪೂರ ಹೇಳಿದ್ದಾರೆ.  

ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಅಧಿಕಾರಿಗಳು ಈ ಕುರಿತು ಗಮನಹರಿಸಿ, ಆಸ್ಪತ್ರೆಯನ್ನು ಸಮರ​‍್ಕವಾಗಿ ಬಳಸಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.