ವಿದ್ಯಾರ್ಥಿನಿ ಕೊಲೆ ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ವಿಶ್ವಹಿಂದು ಪರಿಷದ್, ಬಜರಂಗದಳದಿಂದ ಪ್ರತಿಭಟನಾ ಮೆರವಣಿಗೆ  

ದಿಢೀರ ರಸ್ತೆ ತಡೆದು ಆಕ್ರೋಶ * ಟೈಯರಗೆ ಬೆಂಕಿ ಹಚ್ಚಿ ಪ್ರತಿಭಟನೆ *ರಾಜ್ಯ ಸರ್ಕಾರ ವಿರುದ್ಧ ಘೋಷಣೆ  

ಬೈಲಹೊಂಗಲ 19: ಹುಬ್ಬಳ್ಳಿ ಮಹಾನಗರದ ಬಿವ್ಹಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿಭಾಗದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಕೊಲೆ ಗೈದ ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದ ನಿವಾಸಿ, ಆರೋಪಿ ಫಯಾಜ್ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ವಿಶ್ವಹಿಂದು ಪರಿಷದ್, ಬರಜರಂಗದಳ ತಾಲೂಕು ಘಟಕದಿಂದ ರಸ್ತೆ ತಡೆದು ಟೈಯರಗೆ ಬೆಂಕಿ ಹಚ್ಚಿ ಶುಕ್ರವಾರ ಉಗ್ರ ಪ್ರತಿಭಟನೆ ನಡೆಸಲಾಯಿತು.        

ಪಟ್ಟಣದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ. ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚುತ್ತಿವೆ. ಅದನ್ನು ಕಂಡು ಕಾಣದಂತೆ ಇರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗ್ರಹಮಂತ್ರಿ ಜೆ.ಪರಮೇಶ್ವರಗೆ ಧಿಕ್ಕಾರ ಎಂದು ಕೂಗಿದರು.   

ಪ್ರತಿಭಟನಾ ಮೆರವಣಿಗೆ ಮೂಲಕ ಮುರಗೋಡ ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿದರು. ರಸ್ತೆಯುದ್ದಕ್ಕೂ ಹಿಂದೂ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.  

ವಿಶ್ವಹಿಂದು ಪರಿಷದ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ನೇತೃತ್ವವಹಿಸಿ ಮಾತನಾಡಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಎಂಬ ಸಮಾಜದ ಮಗಳನ್ನು ದುಷ್ಟ ಫಯಾಜ್ ಭೀಕರವಾಗಿ ಕೊಲೆ ಮಾಡಿದ್ದು ಖಂಡನೀಯ. ಸರ್ಕಾರ ಕೂಡಲೇ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.  

ನಟ ಶಿವರಂಜನ ಬೋಳನ್ನವರ, ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ವಕೀಲ ಎಸ್‌.ಜಿ.ಬೂದಯ್ಯನವರಮಠ ಮಾತನಾಡಿ, ’ಜವಾಬ್ದಾರಿ ಸ್ಥಾನದಲ್ಲಿರುವ ಗೃಹಮಂತ್ರಿಗಳ ಬೇಜವಾಬ್ದಾರಿ ಹೇಳಿಕೆಯಿಂದ ಸಮಾಜ ತಲೆ ತಗ್ಗಿಸುವಂತಾಗಿದೆ. ಕೂಡಲೇ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಮೃತ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.  

ಹಿರಿಯರಾದ ವಿ.ಎಸ್‌.ಕೋರಿಮಠ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ವಿಶ್ವನಾಥ ಹಿರೇಮಠ, ಬಿ.ಎಸ್‌. ಫಕೀರಸ್ವಾಮಿಮಠ, ಶಿವಾನಂದ ಕುಡಸೋಮಣ್ಣವರ, ಮಂಜುನಾಥ ಹಿರೇಮಠ, ಗುರು ಮೆಟಗುಡ್ಡ, ಗುರುಪಾದ ಕಳ್ಳಿ, ಸುಭಾಸ ತುರಮರಿ, ಲಕ್ಕಪ್ಪ ಕಾರಗಿ, ರಾಜು ಬೊಂಗಾಳೆ, ಪದಾಧಿಕಾರಿಗಳಾದ ವಿವೇಕ ಪೂಜೇರ, ಗಿರೇಶ ಹರಕುಣಿ, ಗೌತಮ ಇಂಚಲ, ಅಶೋಕ ಸವದತ್ತಿ, ದಯಾನದ ಗೆಜ್ಜಿ, ಸಂಗಮೇಶ ಸವದತ್ತಿಮಠ, ಅಜ್ಜಪ್ಪ ಕುಡಸೋಮಣ್ಣವರ, ನಾರಾಯಣ ನಲವಡೆ, ಜಗದೀಶ ಲೋಕಾಪೂರ, ಅಜ್ಜಪ್ಪ ಪಟ್ಟಣಶೆಟ್ಟಿ, ಕುಮಾರ ಹೂಗಾರ, ಮಹಾಂತೇಶ ಮಾತನವರ, ಮಲ್ಲು ಬೆಳಗಾವಿ, ರಾಜು ಹರಕುಣಿ, ವಿಜಯ ಪೂಜೇರಿ, ಮಹೇಶ ಜಾಧವ, ಮುರುಳೀಧರ ಮಾಳೋದೆ, ಅನೇಕರು ಇದ್ದರು. ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರಮಠ ಮನವಿ ಸ್ವೀಕರಿಸಿದರು.  

ರಸ್ತೆ ಬಂದ್ ಮಾಡಿದ್ದರಿಂದ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.