ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಗೆ ಆಗ್ರಹ

ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಗೆ ಆಗ್ರಹ  Demand for age limit relaxation in teacher recruitment

ಲೋಕದರ್ಶನ ವರದಿ  

ವಿಜಯಪುರ, ಸೆ. 3: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರೆದಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಅಂಗವಿಕಲ ಹಾಗೂ ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಇತರ ಎಲ್ಲ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದ ಅಧ್ಯಕ್ಷ ಲಾಯಪ್ಪ ಇಂಗಳೆ ಆಗ್ರಹಿಸಿದರು.  

ವಿಜಯಪುರ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು, ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ, ಅಂಗವಿಕಲ ಹಾಗೂ ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ಮತ್ತು ಅಂಗವಿಕಲ, ವಿಧವಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು. ಇತರ ವರ್ಗದ ಅಭ್ಯರ್ಥಿಗಳಿಗೂ ಶುಲ್ಕ ರಿಯಾಯಿತಿ ನೀಡುವಂತೆ ಮನವಿ ಮಾಡಿದರು.  

ಈಗಾಗಲೇ ಕೆಕೆ ನಡೆಸುತ್ತಿರುವ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ನೇಮಕಾತಿ, ಭೂಮಾಪಕರ ನೇಮಕಾತಿ ಹಾಗೂ ಕೆಪಿಎಸ್ಸಿ ಗಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಶಿಕ್ಷಕರ ನೇಮಕಾತಿಯಲ್ಲಿ ಮಾತ್ರ ವಯೋಮಿತಿ ಸಡಿಲಿಕೆ ನೀಡದಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರ ಕೂಡಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನೊಂದಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.  

ರಾಜ್ಯದಲ್ಲಿ ನಡೆಯುತ್ತಿರುವ ಇತರ ಎಲ್ಲ ನೇಮಕಾತಿಗಳಲ್ಲಿಯೂ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡುವ ಮೂಲಕ ಸರ್ಕಾರ ಉದ್ಯೋಗಾಕಾಂಕ್ಷಿಗಳಲ್ಲಿ ಭರವಸೆ ಮೂಡಿಸಿದೆ. ಆದರೆ ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲದಿರುವುದರಿಂದ ಕಳೆದ 15 ವರ್ಷಗಳಿಂದ ನೇಮಕಾತಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ. ಕೂಡಲೇ ಮನವಿಗೆ ಸ್ಪಂದಿಸಿ ವಯೋಮಿತಿ ಸಡಿಲಿಕೆ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಪದವೀಧರ ಒಕ್ಕೂಟದ ಮುಖಂಡರಾದ ಭೀಮರಾಯ ಧವಳೇಶ್ವರ, ನಾರಾಯಣ ಮುಧೋಳ, ಕಲ್ಲಪ್ಪ ಶಿವಶರಣ, ಚಂದ್ರಶೇಖರ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ವಿನೋದ ಖೇಡ, ಶರಣು ಬಿರಾದಾರ, ಕಾಶೀನಾಥ ಜಾಧವ, ವಿರೇಶ ಗೊಠೆ, ಎನ್‌.ಡಿ. ಜಾಧವ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.