ಜಲಾಶಯಕ್ಕೆ ನೀರು ಬಿಡುಗಡೆಗೊಳಿಸಲು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ಗೆ ನಿಯೋಗ ಮನವಿ

ಅಥಣಿ 30: ಬೇಸಿಗೆಯಲ್ಲಿ ಬತ್ತುತ್ತಿರುವ ಕೃಷ್ಣಾ, ವೇದ ಗಂಗಾ ನದಿ ಮತ್ತು ಹಿಡಕಲ್ ಜಲಾಶಯಕ್ಕೆ ಮಹಾರಾಷ್ಟ್ರದಿಂದ ನೀರು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನ ಅವರ  ನಿವಾಸದಲ್ಲಿ ಬಿಜೆಪಿಯ ಸಂಸದ, ಶಾಸಕರ ಮತ್ತು ಮಾಜಿ ಶಾಸಕರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.   

ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿರುವ ಪರಿಣಾಮ ಕೃಷ್ಣಾ, ವೇದ ಗಂಗಾ ನದಿಗಳು ಮತ್ತು ಜಿಡಕಲ್ ಜಲಾಶಯ ಖಾಲಿಯಾಗುತ್ತಿದ್ದು, ಇದರ ಪರಿಣಾಮ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದ್ದುದರಿಂದ  ಮಾನವೀಯತೆ ಆಧಾರದಲ್ಲಿ ತಕ್ಷಣ ನೀರು ಬಿಡಲು ಆದೇಶಿಸಬೇಕು ಎಂದು ನಿಯೋಗ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇವರಲ್ಲಿ ಮನವಿ ಮಾಡಿತು.  

ನಮ್ಮ ನಿಯೋಗದ ಮನವಿಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ನೀರು ಬಿಡುಗಡೆ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು ಮತ್ತು ನಮ್ಮ ನಿಯೋಗದ ಮನವಿಗೆ ಸ್ಪಂದಿಸಿದ ಫಡ್ನವೀಸ್ ಇವರನ್ನು ಅಭಿನಂದಿಸಿದರು.  

ನಿಯೋಗದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ,  ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಹುಕ್ಕೇರಿ ಶಾಸಕ ನೀಖೀಲ ಕತ್ತಿ ಉಪಸ್ಥಿತರಿದ್ದರು.