ನೂತನ ಸಂಚಾರಿ ನ್ಯಾಯಾಲಯ ಉದ್ಘಾಟಿಸಿದ ನ್ಯಾಯಮೂರ್ತಿ ಅಶೋಕ ಕಿಣಗಿ

ಪ್ರತಿ  ತಾಲೂಕುಗಳಲ್ಲಿ ನ್ಯಾಯಾಲಯ ಸ್ಥಾಪನೆಗೆ ನಿರ್ಧಾರ 

ತಾಳಿಕೋಟಿ 07: ಪ್ರತಿ  ತಾಲೂಕುಗಳಲ್ಲಿ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಿದ್ದು ಅದರ ಭಾಗವಾಗಿ ತಾಳಿಕೋಟೆಯಲ್ಲಿ ನ್ಯಾಯಾಲಯ ಸ್ಥಾಪನೆಯಾಗುತ್ತಿದೆ. ಇಲ್ಲಿರುವ ಪ್ರಕರಣಗಳನ್ನು ಗಮನಿಸಿದರೆ ಪೂರ್ಣ ಪ್ರಮಾಣದ ನ್ಯಾಯಾಲಯದ ಅವಶ್ಯಕತೆ ಇದೆ. ಆದರೆ ಸದ್ಯ ವಾರದಲ್ಲಿ ಎರಡು ದಿನ ಕಲಾಪ ನಡೆಸಲು ಅನುಮತಿ ದೊರೆತಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ  ನ್ಯಾಯಮೂರ್ತಿ  ಮತ್ತು ವಿಜಯಪುರ  ಜಿಲ್ಲೆಯ ಆಡಳಿತಾತ್ಮಕ   ನ್ಯಾಯಮೂರ್ತಿ ಅಶೋಕ  ಕಿಣಗಿ   ಅವರು  ಹೇಳಿದರು.  

ತಾಳಿಕೋಟೆ ಪಟ್ಟಣದ  ಹಳೆಯ ಪುರಸಭೆಯ ಆವರಣದಲ್ಲಿ  ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ವಿಜಯಪುರ ಹಾಗೂ ಮುದ್ದೇಬಿಹಾಳ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನೂತನವಾಗಿ ಪ್ರಾರಂಭವಾದ ಸಿವಿಲ್ ಜಡ್ಜ್‌ ಮತ್ತು ಜೆಎಂಎಫ್ಸಿ ನ್ಯಾಯಾಲಯ  ಉದ್ಘಾಟನೆ  ನೆರವೇರಿಸಿ ಶನಿವಾರ ಅವರು ಮಾತನಾಡಿದರು.  

ಇಂಡಿ -ಮುದ್ದೇಬಿಹಾಳಕ್ಕೆ ಜಿಲ್ಲಾ ನ್ಯಾಯಾಲಯ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಕೆಯಾಗಿವೆ. ಅಲ್ಲದೇ ಪಟ್ಟಣದಲ್ಲಿ ನ್ಯಾಯಾಲಯದ ಸಮುಚ್ಛಯ ನಿರ್ಮಾಣಕ್ಕೆ 110 ವಿದ್ಯುತ್ ಸ್ಥಾವರದ ಹಿಂದಿನ  165/ಬಿ ನಿವೇಶನ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.   

ಮುದ್ದೇಬಿಹಾಳ ವಕೀಲರ ಸಂಘದ ಅಧ್ಯಕ್ಷ   ಶಶಿಕಾಂತ ಶಿ ಮಾಲಗತ್ತಿ  ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರಿಕರ ಬಹುದಿನ ಬೇಡಿಕೆಯಿದು ಕಳೆದ ಏಳೆಂಟು ವರ್ಷಗಳಿಂದ ನ್ಯಾಯವಾದಿಗಳು ಪಟ್ಟಣದ ನಾಗರಿಕರು ನಿರಂತರ ಪ್ರಯತ್ನಕ್ಕೆ ಇಂದು ಫಲ ದೊರೆತಿದೆ. ದೂರದ ಪೀರಾಪುರದಿಂದ ಮುದ್ದೇಬಿಹಾಳಕ್ಕೆ ಬರಬೇಕಾಗಿತ್ತು. ಆ ಶ್ರಮ, ಸಮಯ ುಳಿಯಲಿದೆ. ನ್ಯಾಯಾಲಯ ಇಲ್ಲಿದೆ ಎಂಬ ಕಾರಣಕ್ಕೆ ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗಬಾರದು. ಹೆಚ್ಚಿನವು ಸ್ಥಳೀಯವಾಗಿ ರಾಜಿ ಸಂಧಾನದಲ್ಲಿಯೆ ಮುಗಿಯುವಂತಾಗಲಿ ಎಂಬ ಕಿವಿ ಮಾತು ಹೇಳಿದರು..  

ವೇದಿಕೆಯಲ್ಲಿ ದಿವಾಣಿ ಹಾಗೂ  ಜೆಎಂಎಫ್ಸಿ ನ್ಯಾಯಾಧೀಶ ಸಂಪತ್ತಕುಮಾರ ಬಳೋಲಗಿಡದ, ವಿಜಯಪುರ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಜು ಮುಜುಮದಾರ ಇದ್ದರು.  

 ಅಧ್ಯಕ್ಷತೆಯನ್ನು  ವಹಿಸಿದ್ದ ವಿಜಯಪುರದ  ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ  ಸ್ವಾಗತಿಸಿದರು.   ಮುದ್ದೇಬಿಹಾಳ ಹಿರಿಯ ದಿವಾಣಿ ಹಾಗೂ  ಜೆಎಂಎಫ್ಸಿ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ  ವಂದಿಸಿದರು.  ಸಾಹಿತಿಗಳಾದ ಅಶೋಕ ಹಂಚಲಿ ಮತ್ತು ಶ್ರೀಕಾಂತ ಪತ್ತಾರ ನಿರ್ವಹಿಸಿದರು   

 ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಗೌಡರ, ಕಾರ್ಯಕಾರಿ ಸಮಿತಿ ಸದಸ್ಯರು,  ಪಟ್ಟಣದ ಪ್ರಮುಖರಾದ ಬಿ.ಎಸ್‌.ಪಾಟೀಲ ಯಾಳಗಿ, ಎಂ.ಆರ್‌.ಕತ್ತಿ, ಎಂ.ಎಸ್‌.ಸರಶೆಟ್ಟಿ, ಪುರಸಭೆಯ ಸದಸ್ಯರು ಮೊದಲಾದವರಿದ್ದರು.