ಮುದ್ದೆಬಿಹಾಲ್

ದಾಸೋಹಿ ಎಫ್‌.ಪಿ.ಓ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ: ಬಂಥನಾಳ

ದಾಸೋಹಿ ಎಫ್‌.ಪಿ.ಓ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ: ಬಂಥನಾಳ

ಮುದ್ದೇಬಿಹಾಳ 14: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉತ್ಪಾದನಾ ಪೂರ್ವ, ಉತ್ಪಾದನಾ ಹಂತದ ಹಾಗೂ ಉತ್ಪಾದನಾ ನಂತರದಲ್ಲಿ ಬೇಕಿರುವ ತಾಂತ್ರಿಕ ನೆರವು, ಕೃಷಿ ಪರಿಕರಗಳ ಪೂರೈಕೆ, ಹಣಕಾಸು ಲಭ್ಯತೆಯೊಂದಿಗೆ ಕೊಯ್ಲೋತ್ತರ ಉತ್ಪನ್ನಗಳಿಗೆ ಉತ್ತಮ ಬೆಲೆಯ ಮಾರುಕಟ್ಟೆ ಒದಗಿಸಿಕೊಡುವ ಜವಾಬ್ದಾರಿಯನ್ನರಿತು ಒಂದೇ ಸೂರಿನಡಿ ಎಲ್ಲವನ್ನೂ ಒದಗಿಸಿಕೊಡುವ ಮೂಲಕ ತನ್ನ ಸದಸ್ಯ ರೈತರ ಹಿತಾಸಕ್ತಿಗಾಗಿ ಕ್ರಿಯಾತ್ಮಕ ಹೆಜ್ಜೆಗಳನ್ನಿಡುತ್ತಿರುವ ದಾಸೋಹಿ ರೈತ ಉತ್ಪಾದಕ ಕಂಪನಿಯಿಂದ ಸಾಮೂಹಿಕ ಕೃಷಿಯ ಮೌಲ್ಯ ಹೆಚ್ಚಿದೆ ಎಂದು ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಎಂ.ಎಚ್ ಬಂಥನಾಳ ಹೇಳಿದರು. 

ಬೆಂಗಳೂರಿನ ಜಲಾನಯನ ಅಭಿವೃದ್ಧಿ ಇಲಾಖೆಯ ಸಭಾ ಕೊಠಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿ., ಮುದ್ದೇಬಿಹಾಳ ಇದರ ಒಂದು ವರ್ಷದ ಸಾಧನೆಯನ್ನೊಳಗೊಂಡ ಸ್ಟ್ರೆಟೆಜಿಕ್ ಓವರವಿವ್ಹ್‌ 2024-25 ಪುಸ್ತವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ರೈತ ಉತ್ಪಾದಕ ಕಂಪನಿ ಎಂದಾಕ್ಷಣ ಇದೊಂದು ಓಪಚಾರಿಕ ಸಂಸ್ಥೆಯನ್ನಾಗಿ ಮಾತ್ರ ನೋಡದೇ ಕಾರ​‍್ೋರೇಟ್ ಮಾದರಿಯ ಆಡಳಿತ ವ್ಯವಸ್ಥೆ, ವ್ಯವಹಾರಿಕ ಮಾದರಿ ಹಾಗೂ ಆಧುನಿಕ ತಾಂತ್ರಿಕತೆಗಳ ಅಳವಡಿಕೆಯೊಂದಿಗೆ ಅಗತ್ಯ ಮೂಲಸೌಕರ್ಯಗಳನ್ನು ಹೊಂದಲು ನೀಡಿದ ಆದ್ಯತೆಯಿಂದ ದಾಸೋಹಿ ಎಫ್‌.ಪಿ.ಓ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು. 

ಜಲಾನಯನ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮತ್ತು ಎಫ್‌.ಪಿ.ಓ ನೋಡಲ್ ಅಧಿಕಾರಿ ಪಂಕಜಾ ಮಾತನಾಡಿ ವೃತ್ತಿಪರ ಆಚರಣೆಗಳ ಮೂಲಕ ವ್ಯವಹಾರಗಳನ್ನು ನಿರ್ವಹಿಸುವುದರಿಂದ ರೈತ ಉತ್ಪಾದಕ ಕಂಪನಿಗಳನ್ನು ಕಾಪೋರೇಟ್ ಮಾದರಿಯಲ್ಲಿ ಕಟ್ಟಬಹುದೆಂಬುದನ್ನು ದಾಸೋಹಿ ನಿರೂಪಿಸಿದೆ. ಸಾಮೂಹಿಕ ಚಟುವಟಿಕೆಗಳಿಗೆ ಒತ್ತು ನೀಡಿ ಸದಸ್ಯ ರೈತರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಗುರುತಿಸಿ ಅನುಷ್ಠಾನಗೊಳಿಸಲು ತೋರಿದ ಬದ್ದತೆ ಅನುಕರಣೀಯವಾಗಿವೆ ಎಂದರು.  

ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುಧೀರ ಕುಲಕರ್ಣಿ ಮಾತನಾಡಿ ತಾನು ಪ್ರತಿನಿಧಿಸುವ ರೈತ ಸಮುದಾಯಕ್ಕೆ ಉತ್ತಮ ಸೇವೆಯನ್ನು ನೀಡಬೇಕೆಂಬ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ತನ್ನ ಸದಸ್ಯರಲ್ಲಿ ವಿಶ್ವಾರ್ಹತೆಯನ್ನು ಹೆಚ್ಚಿಸಿ ಇಟ್ಟುಕೊಂಡ ಉದ್ದೇಶ ಹಾಗೂ ತಲುಪಬೇಕಾದ ಗುರಿಯೊಂದಿಗೆ  ಉತ್ತಮವಾಗಿ ಕರ್ಯನಿರ್ವಹಿಸುತ್ತಿರುವ ರಾಜ್ಯದ ಕೆಲವೇ ರೈತ ಉತ್ಪಾದಕ ಸಂಸ್ಥೆಗಳಲ್ಲಿ ಸ್ಥಾನ ಪಡೆದ ದಾಸೋಹಿಯ ಸಾಧನೆ ಅನನ್ಯವೆಂದರು.  

ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ ಸ್ವಸಹಾಯ, ಸ್ವಯಂ ಜವಾಬ್ದಾರಿ, ಸಮಾನತೆ, ಒಗ್ಗಟ್ಟು, ಪ್ರಜಾಪ್ರಭುತ್ವ ಹಾಗೂ ಷೇರು ಬಂಡವಾಳಗಳೆಂಬ ಪಂಚ ಸಹಕಾರಿ ಮೌಲ್ಯಗಳನ್ನು ಆಧಾರವಾಗಿರಿಸಿಕೊಂಡು ಸ್ಥಾಪಿಸಲಾದ ಕಂಪನಿಗೆ ರೈತರು ನೀಡಿದ ಬೆಂಬಲ ಹಾಗೂ ಅಧಿಕಾರಿಗಳು ತೋರಿದ ಸಹಕಾರವೇ ನಮ್ಮ ಸಾಧನೆಗೆ ಕಾರಣವೆಂದರು.ಜಿಲ್ಲಾ ಸಂಪನ್ಮೂ ವ್ಯಕ್ತಿ ಕುಮುದಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸತೀಶ ವಂದಿಸಿದರು. 


ಸುದ್ದಿ ಓದಿ