ಬೆಂಗಳೂರು, ಮೇ 26, ಸ್ಯಾಂಡಲ್ ವುಡ್ ನಲ್ಲಿ ‘ಬಾಸ್’ ಪಟ್ಟದ ಸಮರ ಮತ್ತೆ ಶುರುವಾಗಿದೆ. ಒಂದಷ್ಟು ದಿನ ತಣ್ಣಗಿದ್ದ ಈ ವಾರ್ ಪುನಃ ಕೇಳಿಬರುತ್ತಿರೋದಕ್ಕೆ ಕಾರಣ ಒಂದು ಟ್ವೀಟ್.ಹೌದು, ನಿರ್ದೇಶಕ ಪವನ್ ಒಡೆಯರ್ ಮಾಡಿದ ಒಂದೇ ಒಂದು ಟ್ವೀಟ್ ನಿನ್ನೆಯಿಂದ ದರ್ಶನ್ ಹಾಗೂ ಯಶ್ ಅಭಿಮಾನಿಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.ನಿರ್ದೇಶಕ ಪವನ್ ಒಡೆಯರ್ ಅವರು ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಯಶ್ ಅವರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಯಶ್ ಅವರನ್ನು ಬಾಸ್ ಎಂದು ಕರೆದಿದ್ದಾರೆ.
ಕೊರೋನಾಗೆ ಸಂಬಂಧಿಸಿದ ಹಾಡನ್ನು ಸಾಮಾಜಿಕ ಅಂತರ ಕಾಯ್ದುಕೊಂಡೇ ಚಿತ್ರೀಕರಿಸಿದ ಬಗ್ಗೆ ಅದರಲ್ಲಿ ಹಂಚಿಕೊಂಡಿದ್ದು, ಬ್ರದರ್ ಬಾಸ್ ಎಂದು ಯಶ್ ರನ್ನು ಕರೆದಿರುವುದನ್ನು ನೋಡಿದ ಕೂಡಲೇ ದರ್ಶನ್ ಅಭಿಮಾನಿಗಳು ನಿರ್ದೇಶಕ ಪವನ್ ಒಡೆಯರ್ ಅವರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಿದ್ದು, ಜೊತೆಗೆ ಅವಾಚ್ಯ ಶಬ್ದಗಳನ್ನು ಬಳಸುತ್ತಾ ಟ್ರೋಲ್ ಮಾಡುತ್ತಿದ್ದಾರೆ.
ಇದರ ಬೆನ್ನಲ್ಲೇ ಯಶ್ ಅಭಿಮಾನಿಗಳು ಸಹ ಪವನ್ ಒಡೆಯರ್ ಅವರ ಪೋಸ್ಗಳಿಗೆ ಕಮೆಂಟ್ ಮಾಡುತ್ತಿರುವ ಡಿ ಬಾಸ್ ಅಭಿಮಾನಿಗಳಿಗೆ ಉತ್ತರ ಕೊಡುತ್ತಿದ್ದಾರೆ.ದರ್ಶನ್ ಹಾಗೂ ಯಶ್ ಈ ಟ್ರೋಲ್ ಗಳ ಬಗ್ಗೆ ಏನನ್ನೂ ಬಹಿರಂಗವಾಗಿ ಹೇಳಿಲ್ಲ. ಆದರೆ ದಚ್ಚು ಅಭಿಮಾನಿಗಳು ‘ಡಿ ಬಾಸ್’ ಅಂತ ನಾವು ಹೆಸರು ರಿಜಿಸ್ಟರ್ ಮಾಡಿಸಿದ್ದೇವೆ. ಹೀಗಾಗಿ ಬೇರೊಬ್ಬ ನಟನನ್ನು ಬಾಸ್ ಅಂತ ಕರೆದಾಗ ನೋವಾಗುತ್ತೆ, ಬೇಸರವಾಗುತ್ತೆ ಅಂತ ಹೇಳಿದ್ದಾರೆ. ಇನ್ನು, ಯಶ್ ಅಭಿಮಾನಿಗಳು, ‘ಬಾಸ್’ ಅನ್ನೋದು ಯೂನಿವರ್ಸಲ್ ವರ್ಡ್. ಯಾರು ಯಾರನ್ನ ಬೇಕಾದ್ರೂ ಬಾಸ್ ಅಂತ ಕರೆಯಬಹುದು ಅಂತ ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಸ್ಯಾಂಡಲ್ವುಡ್ ಬಾಸ್ ಯಾರು ಎಂಬ ವಿಷಯಕ್ಕೆ ವಿವಾದವಾಗಿತ್ತು. ಅದಕ್ಕೆ ಕಾರಣವಾಗಿದ್ದು, ಟಗರು ಚಿತ್ರತಂಡ ನಟ ಶಿವರಾಜ್ ರಾಜ್ ಕುಮಾರ್ ಅವರಿಗೆ ಚಂದನವನದ ಬಾಸ್ ಎಂಬ ಬಿರುದನ್ನು ನೀಡಿದ್ದು. ಈ ವಿವಾದ ತಾರಕ್ಕಕ್ಕೇರುತ್ತಿದ್ದಂತೆ ನಟ ಯಶ್ ತಮ್ಮ ಹೊಸ ಕಾರಿಗೆ 'ಬಾಸ್' (8055) ಎಂಬ ನಂಬರನ್ನು ರಿಜಿಸ್ಟರ್ ಮಾಡಿಸಿದ್ದರು. ಆಗಲೂ ಶಿವಣ್ಣ, ದರ್ಶನ್ ಹಾಗೂ ಯಶ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾರ್ ನಡೆದಿತ್ತು.ಆಗ ಶಿವರಾಜ್ ಕುಮಾರ್ ಅವರು ಈ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ, ಇಲ್ಲಿ ಎಲ್ಲರೂ ಒಂದೆ. ಬಾಸ್ ಪಟ್ಟಕ್ಕಾಗಿ ಸ್ಟಾರ್ಗಳಲ್ಲಿ ಯಾರೂ ಕಿತ್ತಾಡುತ್ತಿಲ್ಲ. ಅಭಿಮಾನಿಗಳು ಮಾತ್ರ ಹೀಗೆ ಮಾಡುತ್ತಿದ್ದಾರೆ. ಈ ರೀತಿಯ ಜಗಳ ಬೇಡ ಎಂದು ಸಮಾಧಾನ ಮಾಡಿದ್ದರು.ದರ್ಶನ್ ಸಹ ಅಭಿಮಾನಿಗಳನ್ನು ಮನೆಗೆ ಕರೆದು ಬೇರೆ ನಟರನ್ನು ಟ್ರೋಲ್ ಮಾಡಬೇಡಿ ಎಂದು ಬುದ್ಧಿ ಹೇಳಿದ್ದರು. ಈಗ ಮತ್ತೆ ಬಾಸ್ ಪದ ದರ್ಶನ್ ಹಾಗೂ ಯಶ್ ಅಭಿಮಾನಿಗಳ ವಾಕ್ಸಮರಕ್ಕೆ ಕಾರಣವಾಗಿದೆ.